ನವದೆಹಲಿ: ಸಚಿವ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಶಾಸಕ ಉಮೇಶ್ ಕತ್ತಿ ಹೊಸ ವರಸೆ ತೆಗೆದಿದ್ದು, ತಮ್ಮ ಸಹೋದರನಿಗೆ ರಾಜ್ಯಸಭಾ ಸ್ಥಾನ ನೀಡುವಂತೆ ಒತ್ತಾಯ ಹೇರಿದ್ದು, ಇದಕ್ಕಾಗಿ ದೆಹಲಿ ಮಟ್ಟದಲ್ಲಿ ಲಾಬಿಗೆ ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ಕೇಳುತ್ತೇನೆ. ಸಚಿವ ಸ್ಥಾನಕ್ಕೆ ಬದಲಾಗಿ ಟಿಕೆಟ್ ಕೇಳುತ್ತೇನೆ. ಉಮೇಶ್ ಕತ್ತಿ ಬೇರೆ, ರಮೇಶ್ ಕತ್ತಿ ಬೇರೆ. ನಾವಿಬ್ಬರು ಸಹೋದರರು ಹೌದಾದರೂ, ನಮ್ಮ ಜೀವನ ಬೇರೆ ಎಂದರು.
ಇದೇ ವೇಳೆ ಇನ್ನೂ ಆರು ಸಚಿವ ಸ್ಥಾನ ಬಾಕಿ ಇರುವ ಕುರಿತು ಮಾತನಾಡಿದ ಅವರು, ಮುಂದೆ ನನಗೂ ಸಚಿವ ಸ್ಥಾನ ಸಿಗಬಹುದು. ಪ್ರತಿ ಬಾರಿ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತದೆ. ಆದರೆ, ಕಡೆ ಘಳಿಗೆಯಲ್ಲಿ ಪಟ್ಟಿಯಿಂದ ಹೊರಗಿರುತ್ತದೆ. ಹೈಕಮಾಂಡ್ ನಾಯಕರಿಗೆ ಎಲ್ಲವೂ ಗೊತ್ತಿದೆ. ಪಕ್ಷದಲ್ಲಿ ಹಿರಿಯನಿದ್ದೇನೆ. ಇನ್ನೂ 2 ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದೇನೆ. ಮುಂದೆ ಮಂತ್ರಿಯಾಗಬಹುದು, ಸಿಎಂ ಆಗಲೂಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ಬೇಕು. ಇದೇ ಉದ್ದೇಶದಿಂದ ಜೆ.ಪಿ. ನಡ್ಡಾ ಭೇಟಿಯಾಗುತ್ತೇನೆ. ಬೆಳಗ್ಗೆ 11 ಗಂಟೆಗೆ ಸಮಯ ನೀಡಿದ್ದಾರೆ. ಜೂನ್ನಲ್ಲಿ 4 ಸ್ಥಾನ ಖಾಲಿಯಾಗುತ್ತಿವೆ. ಬಿಜೆಪಿಗೆ ಎರಡು ಸ್ಥಾನಗಳು ಸಿಗುತ್ತಿವೆ. ಅವುಗಳಲ್ಲಿ ಒಂದು ಸ್ಥಾನ ನೀಡಲು ಮನವಿ ಮಾಡಿದ್ದೇನೆ. ರಮೇಶ್ ಕತ್ತಿ ಕೂಡಾ ಮಾಜಿ ಸಂಸದರು. ಹೀಗಾಗಿ ಅವರಿಗೆ ಟಿಕೆಟ್ ಕೇಳುತ್ತಿದ್ದೇವೆ ಎಂದರು.
ಹಾಲಿ ಸಂಸದರಾಗಿರುವ ಪ್ರಭಾಕರ್ ಕೋರೆ ಇದೇ ಜೂನ್ನಲ್ಲಿ ನಿವೃತ್ತಿಯಾಗುತ್ತಿದ್ದು, ಈ ಸ್ಥಾನವನ್ನು ರಮೇಶ್ ಕತ್ತಿಗೆ ನೀಡುವಂತೆ ಉಮೇಶ್ ಕತ್ತಿ ಆಗ್ರಹಿಸಿದ್ದಾರೆ.
ತ್ಯಾಗಕ್ಕಾಗಿ ಫಲ:ಅಲ್ಲದೇ, ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಮಾಜಿ ಸಂಸದ ರಮೇಶ್ ಕತ್ತಿ ಮುಂದಾಗಿದ್ದರು. ಆದರೆ, ಹೈ ಕಮಾಂಡ್ ನಿರ್ದೇಶನದಂತೆ ಕಡೆ ಕ್ಷಣದಲ್ಲಿ ಅವರು ಈ ಸ್ಥಾನವನ್ನು ಅಣ್ಣಾ ಸಾಹೇಬ್ ಜೊಲ್ಲೆಗೆ ಬಿಟ್ಟು ಕೊಟ್ಟಿದ್ದರು. ಈ ಹಿನ್ನೆಲೆ ಅವರು ರಾಜ್ಯ ಸಭಾ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ರಮೇಶ್ ಕತ್ತಿ ಮೂಲಕ ಸಚಿವ ಸ್ಥಾನಕ್ಕೆ ಉಮೇಶ್ ಕತ್ತಿ ಲಾಬಿ
ಇನ್ನು ರಮೇಶ್ ಕತ್ತಿಗೆ ರಾಜ್ಯಸಭಾ ಸ್ಥಾನ ನೀಡುವಂತೆ ಒತ್ತಡ ಹೇರುವ ಮೂಲಕ ಉಮೇಶ್ ಕತ್ತಿ ಕೂಡ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ಇನ್ನು ಆರು ಸಚಿವ ಸ್ಥಾನಗಳು ಬಾಕಿ ಇರುವ ಹಿನ್ನೆಲೆ ಈ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಬೇಕು. ಇಲ್ಲ ರಮೇಶ್ಗೆ ಸ್ಥಾನ ನೀಡಬೇಕು ಎಂಬುದು ಉಮೇಶ್ ಕತ್ತಿ ಲೆಕ್ಕಾಚಾರ ಎನ್ನಲಾಗಿದೆ.