ಖಾತೆ ಹಂಚಿಕೆ ಬೆನ್ನಲ್ಲೇ ಕಚೇರಿ ಕಿರಿಕ್; ವಿಧಾನಸೌಧದ ಕೊಠಡಿಗೆ ಪಟ್ಟುಹಿಡಿದ ಬಿ.ಸಿ. ಪಾಟೀಲ್

ಬೆಂಗಳೂರು: ಬಿಎಸ್ವೈ ಸಂಪುಟದಲ್ಲಿ ತಮಗೆ ಸಿಕ್ಕ ಖಾತೆಯ ಬಗ್ಗೆ ಸಚಿವರು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ, ಆರು ಸಚಿವರ ಖಾತೆಗಳನ್ನು ಮಂಗಳವಾರ ಬದಲಾಯಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕೊಠಡಿ ಕಿರಿಕ್ ಶುರುವಾಗಿದ್ದು, ವಿಧಾನಸೌಧದಲ್ಲೇ ತಮಗೆ ಕೊಠಡಿ ನೀಡಬೇಕೆಂದು ಸಚಿವರು ಪಟ್ಟುಹಿಡಿದಿದ್ದಾರೆ.

ಖಾತೆ ಹಂಚಿಕೆ ವೇಳೆ ತಮಗೆ ಸಿಕ್ಕಿದ್ದ ಅರಣ್ಯ ಇಲಾಖೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದ ಬಿ.ಸಿ. ಪಾಟೀಲ್ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ಕೃಷಿ ಖಾತೆಯನ್ನು ಬಿ.ಸಿ. ಪಾಟೀಲ್​ಗೆ ವಹಿಸಲಾಗಿತ್ತು. ಇದೀಗ ತಮಗೆ ನೀಡಿರುವ ಕೊಠಡಿ ಬಗ್ಗೆಯೂ ತಗಾದೆ ತೆಗದಿರುವ ಬಿ.ಸಿ. ಪಾಟೀಲ್ ವಿಧಾನಸೌಧದಲ್ಲೇ ಕೊಠಡಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕೃಷಿ ಸಚಿವರಾಗಿ ನೇಮಕವಾಗಿದ್ದ ಬಿ.ಸಿ. ಪಾಟೀಲ್​ಗೆ ವಿಕಾಸಸೌಧದಲ್ಲಿ ವಿಶಾಲವಾಗಿರೋ ಕೊಠಡಿಯನ್ನೇ ಹಂಚಿಕೆ ಮಾಡಲಾಗಿತ್ತು. ಆದರೆ, ವಿಧಾನಸೌಧದಲ್ಲೇ ಕೊಠಡಿಗೆ ಬೇಕು, ವಿಧಾನಸೌಧದಲ್ಲಿ ಕೊಠಡಿಯಿದ್ದರೆ ಪ್ರತಿಷ್ಠೆ ಹೆಚ್ಚಾಗುತ್ತದೆ. ವಿಧಾನಸೌಧದ 3ನೇ ಮಹಡಿಯೇ ಬೇಕು. ಆಗ ಮಾಧ್ಯಮಗಳ ಸಂಪರ್ಕ ಹೆಚ್ಚಾಗುತ್ತದೆ ಎಂದು ಸಿಎಂ ಕಚೇರಿಯ ಅಧಿಕಾರಿಗಳ ಮೇಲೆ ಬಿ.ಸಿ. ಪಾಟೀಲ್ ಒತ್ತಡ ಹೇರುತ್ತಿದ್ದಾರೆ.

ಮಂಗಳವಾರ ವಿಧಾನಸೌಧಕ್ಕೆ ಬಂದಿದ್ದ ಬಿ.ಸಿ. ಪಾಟೀಲ್ ರೌಂಡ್ ಹೊಡೆದಿದ್ದಾರೆ. 3ನೇ ಮಹಡಿಯಲ್ಲೇ ಕೊಠಡಿ ನೀಡಿ ಎಂದು ಡಿಪಿಎಆರ್ ಕಾರ್ಯದರ್ಶಿಗೆ ಒತ್ತಡ ಹೇರಿದ್ದಾರೆ. ಹೀಗಾಗಿ, ಖಾತೆ ಹಂಚಿಕೆಯ ನಂತರ ನಿಟ್ಟುಸಿರುವ ಬಿಟ್ಟಿದ್ದ ಯಡಿಯೂರಪ್ಪನವರಿಗೆ ಮತ್ತೊಮ್ಮೆ ವಲಸಿಗರ ತಲೆನೋವು ಶುರುವಾಗಿದೆ.

ಸೋಮವಾರ ನೂತನ ಸಚಿವರ ಖಾತೆ ಹಂಚಿಕೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ರಮೇಶ್ ಜಾರಕಿಹೊಳಿ – ಜಲ ಸಂಪನ್ಮೂಲ, ಡಾ. ಕೆ. ಸುಧಾಕರ್ – ವೈದ್ಯಕೀಯ ಶಿಕ್ಷಣ, ಆನಂದ್ ಸಿಂಗ್ – ಆಹಾರ ಮತ್ತು ನಾಗರಿಕ, ಶ್ರೀಮಂತ ಪಾಟೀಲ್- ಜವಳಿ ಇಲಾಖೆ, ನಾರಾಯಣ ಗೌಡ- ಪೌರಾಡಳಿತ ಮತ್ತು ತೋಟಗಾರಿಕೆ, ಎಸ್​.ಟಿ. ಸೋಮಶೇಖರ್- ಸಹಕಾರ, ಶಿವರಾಂ ಹೆಬ್ಬಾರ್ – ಕಾರ್ಮಿಕ, ಭೈರತಿ ಬಸವರಾಜು – ನಗರಾಭಿವೃದ್ಧಿ, ಗೋಪಾಲಯ್ಯ – ಸಣ್ಣ ಕೈಗಾರಿಕೆ ಹಾಗೂ ಬಿ.ಸಿ. ಪಾಟೀಲ್​ಗೆ ಅರಣ್ಯ ಖಾತೆ ನೀಡಲಾಗಿತ್ತು.

ಆದರೆ, ಖಾತೆ ಬದಲಾವಣೆಗೆ ಕೆಲವು ಸಚಿವರು ಒತ್ತಡ ಹೇರಿದ್ದರಿಂದ ಮಂಗಳವಾರ ಖಾತೆ ಮರುಹಂಚಿಕೆ ಮಾಡಲಾಗಿತ್ತು. ಸಿಸಿ ಪಾಟೀಲ್ ಅವರಿಗೆ ಗಣಿ ಹಾಗೂ ಭೂ ವಿಜ್ಞಾನ ಜೊತೆಗೆ ಕೈಗಾರಿಕೋದ್ಯಮ ಇಲಾಖೆ ನೀಡಲಾಗಿದೆ. ಇವರ ಬಳಿ ಹೆಚ್ಚುವರಿಯಾಗಿ ಇದ್ದ ಜೈವಿಕ ಪರಿಸರ ಇಲಾಖೆಯನ್ನು ಆನಂದ್​ ಸಿಂಗ್ ಅವರಿಗೆ ನೀಡಲಾಗಿದೆ. ಆನಂದ್ ಸಿಂಗ್​ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನೀಡಲಾಗಿತ್ತು. ಈ ಖಾತೆಯ ಬದಲಿಗೆ ಅರಣ್ಯ ಮತ್ತು ಪರಿಸರ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಸಣ್ಣ ಕೈಗಾರಿಕೆ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದ ಕೆ.ಗೋಪಾಲಯ್ಯ ಅವರಿಗೆ ಆಹಾರ ಮತ್ತು ನಾಗರಿಕ ಇಲಾಖೆ ನೀಡಲಾಗಿದೆ. ಶ್ರೀಮಂತ ಪಾಟೀಲ್ ಅವರಿಗೆ ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಖಾತೆ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ