ಭಾರತದ ಭೇಟಿ ವೇಳೆ 50 ರಿಂದ 70 ಲಕ್ಷ ಜನ ಸೇರಿಸುವುದಾಗಿ ಪ್ರಧಾನಿ ಮೋದಿ ಭರವಸೆ; ಬಹಿರಂಗಪಡಿಸಿದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಗಾದಿಗೆ ಏರಿದ ನಂತರ ಇದೇ ಮೊದಲ ಬಾರಿಗೆ ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದು ಪ್ರವಾಸವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಅಲ್ಲದೆ, ಅಹಮದಾಬಾದ್ನಲ್ಲಿ ನಡೆಯಲಿರುವ ಮೋದಿ ಜೊತೆಗಿನ ಜಂಟಿ ಸಾರ್ವಜನಿಕ ಸಭೆಯಲ್ಲಿ 50 ರಿಂದ 70 ಲಕ್ಷ ಜನರನ್ನು ಸೇರಿಸುವುದಾಗಿ ಭಾರತದ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗ ಪಡಿಸಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರ ಅಹ್ವಾನದ ಮೇರೆಗೆ ಡೊನಾಲ್ಡ್ ಟ್ರಂಪ್ ಈ ತಿಂಗಳಾಂತ್ಯದಲ್ಲಿ ಫೆಬ್ರವರಿ 24-25 ರಂದು ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರವಾಸದ ವೇಳಾಪಟ್ಟಿಯಂತೆ ನವ ದೆಹಲಿಗೆ ಆಗಮಿಸಲಿರುವ ಟ್ರಂಪ್ ಫೆಬ್ರವರಿ 25 ರಂದು ಗುಜರಾತ್ ರಾಜ್ಯದ ಅಹಮದಾಬಾದ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಜಂಟಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅಮೆರಿಕ ಶ್ವೇತ ಭವನದಲ್ಲಿ ಈ ಕುರಿತು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, “ಭಾರತದ ಪ್ರಧಾನಿ ನರೇಂದ್ರ ಮೋದಿ ಓರ್ವ ಸಂಭಾವಿತ ಮತ್ತು ಮಹಾನ್ ವ್ಯಕ್ತಿ. ಈ ತಿಂಗಳ ಕೊನೆಯ ವಾರದಲ್ಲಿ ನಾನು ಭಾರತದ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಅಲ್ಲದೆ, ಈ ಪ್ರವಾಸವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ ಪತ್ರಕರ್ತರೋರ್ವರ ಪ್ರಶ್ನೆಗೆ ಉತ್ತರಿಸಿರುವ ಡೊನಾಲ್ಡ್ ಟ್ರಂಪ್, “ಈ ಪ್ರವಾಸದ ವೇಳೆ ಉಭಯ ದೇಶಗಳ ನಡುವೆ ವ್ಯಾಪಾರ ಸಂಬಂಧಿತ ಮಾತುಕತೆ ನಡೆಯಲಿದೆ. ಈ ಮಾತುಕತೆ ಫಲಪ್ರದವಾದರೆ, ಹಲವಾರು ಒಪ್ಪಂದಗಳಿಗೂ ಸಹಿ ಹಾಕುವ ಸಾಧ್ಯತೆ ಇದೆ” ಎಂದು ಮಾಹಿತಿ ನೀಡಿದ್ದಾರೆ.

ಅಮೆರಿಕದ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸುದ್ದಿ ಸಂಸ್ಥೆಗೆ ಮಾತನಾಡಿದ್ದು, “ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿರುವುದು ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಬಲವಾದ ವೈಯಕ್ತಿಕ ಸಂಬಂಧದ ಪ್ರತಿಬಿಂಬವಾಗಿದೆ. ಅಲ್ಲದೆ, ಅಮೆರಿಕ ಅಧ್ಯಕ್ಷರ ಈ ಭಾರತ ಪ್ರವಾಸ ಉಬಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟಂಪ್ ಹಾಗೂ ಪ್ರಧಾನಿ ಮೋದಿ ನಡುವಿನ ಸಂಬಂಧ ದಿನಿದಿಂದ ದಿನಕ್ಕೆ ಉತ್ತಮವಾಗುತ್ತಲೇ ಸಾಗಿದೆ. 2019ರಲ್ಲಿ ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ಆಯೋಜಿಸಲಾಗಿದ್ದ “ಹೌಡಿ ಮೋದಿ” ಕಾರ್ಯಕ್ರಮದಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದ ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್ ಅವರನ್ನು ಹಾಡಿಹೊಗಳಿದ್ದರು. ಅಲ್ಲದೆ, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಮೋದಿ ಅಮೆರಿಕಾಗೆ 4 ಬಾರಿ ಭೇಟಿ ನೀಡಿದ್ದಾರೆ.

ಜಂಟಿ ಸಾರ್ವಜನಿಕ ಭಾಷಣಕ್ಕೆ ಸೇರಲಿದ್ದಾರೆ ಮಿಲಿಯನ್ ಗಟ್ಟಲೆ ಜನಗುಜರಾತ್​ನ ಅಹಮದಾಬಾದ್​ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಮೊಟೆರಾ ಕ್ರೀಡಾಂಗಣದಲ್ಲಿ ಉಭಯ ನಾಯಕರು ಫೆ.25ರಂದು ಜಂಟಿ ಭಾಷಣ ಮಾಡಲಿದ್ದಾರೆ. ಈ ಕ್ರೀಡಾಂಗಣವನ್ನು ಅಂದಾಜು 100 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 1,00,000 ಪ್ರೇಕ್ಷಕರ ಆಸನ ಸಾಮರ್ಥ್ಯವನ್ನು ಅಳವಡಿಸಲಾಗಿದೆ. ಮೊಟೆರಾ ಕ್ರೀಡಾಂಗಣವು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಹಾಸ್ಯ ಚಟಾಕಿ ಹಾರಿಸಿರುವ ಡೊನಾಲ್ಡ್ ಟ್ರಂಪ್, “ಅಮೆರಿಕದಲ್ಲಿ ಸಾಮಾನ್ಯವಾಗಿ ನನ್ನ ಭಾಷಣಕ್ಕೆ 40 ರಿಂದ 50 ಸಾವಿರ ಜನ ಸೇರುತ್ತಾರೆ. ಇದು ನನಗೆ ಅಷ್ಟಾಗಿ ಖುಷಿ ನೀಡುವುದಿಲ್ಲ. ಆದರೆ, ಭಾರತದಲ್ಲಿ ವಿಶ್ವದ ಅತಿದೊಡ್ಡ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು ನಾನು ಶೀಘ್ರದಲ್ಲೇ ಅಲ್ಲಿ ಭಾಷಣ ಮಾಡಲಿದ್ದೇನೆ. ಈ ಸಮಾರಂಭಕ್ಕೆ 50 ರಿಂದ 70 ಲಕ್ಷ ಜನರನ್ನು ಸೇರಿಸುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ” ಎಂಬ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ