ಹೊಸದಿಲ್ಲಿ: ಮಾತಾ ವೈಷ್ಣೋದೇವಿ ದೇವಸ್ಥಾನದ ಆಡಳಿತ ಮಂಡಳಿ ತನ್ನ ಭಕ್ತರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಹೌದು, ಇಂದಿನಿಂದ ವೈಷ್ಣೋದೇವಿ ಭಕ್ತಾದಿಗಳು ಪ್ರತಿ ದಿನ ಸಾಯಂಕಾಲ ಬೆಳ್ಳಿ ಪರದೆಯ ಮೇಲೆ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ನಡೆಯುವ ಆರತಿಯನ್ನು ವೀಕ್ಷೀಸಬಹುದಾಗಿದೆ. ಕಟರಾನಲ್ಲಿರುವ ಆಧ್ಯಾತ್ಮಿಕ ಕೇಂದ್ರದಲ್ಲಿ ಭಕ್ತರು ಈ ಸೌಲಭ್ಯ ಪಡೆಯಬಹುದಾಗಿದೆ. ಆದರೆ, ಇಂದಿನಿಂದ ಮುಂದಿನ ಒಂದು ವಾರ ಈ ಸೌಲಭ್ಯ ಉಚಿತವಾಗಿರಲಿದೆ. ಬಳಿಕ ಈ ಆರತಿಯನ್ನು ವೀಕ್ಷಿಸಲು ಭಕ್ತಾದಿಗಳು ರೂ.30 ಶುಲ್ಕ ನೀಡಬೇಕು.
ಲೈವ್ ಆರತಿ ವೀಕ್ಷಿಸಬಹುದು
ಈ ಲೈವ್ ಆರತಿಗಾಗಿ ದೇವಸ್ಥಾನದ ಆಡಳಿತ ಮಂಡಳಿ ಮೊದಲು ಟ್ರಯಲ್ ಕೂಡ ನಡೆಸಿದೆ. ಕಳೆದ ಸೋಮವಾರ ಈ ಪರೀಕ್ಷೆ ಸಫಲವಾಗಿದೆ. ದೇವಸ್ಥಾನದ ಆಡಿಟೋರಿಯಂನಲ್ಲಿ ನಡೆಸಲಾದ ಈ ಪ್ರಯೋಗದಲ್ಲಿ ಶ್ರೈನ್ ಬೋರ್ಡ್ ನ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಸೇರಿದಂತೆ ಆಡಳಿತ ಮಂಡಳಿಯ ಹಲವು ವರಿಷ್ಠ ಅಧಿಕಾರಿಗಳು ಭಾಗವಹಿಸಿದ್ದರು. ಹೀಗಾಗಿ ಇನ್ಮುಂದೆ ದೊಡ್ಡ ಪರದೆಯ ಮೇಲೆ ಭಕ್ತಾದಿಗಳು ಲೈವ್ ಆರತಿಯನ್ನು ವೀಕ್ಷಿಸಬಹುದಾಗಿದೆ.
ಈ ಸೇವೆ ಒಂದು ವಾರ ಉಚಿತವಾಗಿರಲಿದೆ
ಈ ಕುರಿತು ಹೇಳಿಕೆ ನೀಡಿರುವ ಶ್ರೈನ್ ಬೋರ್ಡ್ ನ ಸಿಇಓ ರಮೇಶ್ ಕುಮಾರ್, ಈ ಕುರಿತಾದ ಪ್ರಯೋಗ ಇದೀಗ ಯಶಸ್ವಿಯಾಗಿದ್ದು, ಶ್ರೈನ್ ಬೋರ್ಡ್ ಭಕ್ತಾದಿಗಳಿಗೆ ಕೊಡುಗೆಯ ರೂಪದಲ್ಲಿ ಮೊದಲ ಒಂದು ವಾರ ಈ ಸೇವೆಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದಿದ್ದಾರೆ. ಹೀಗಾಗಿ ಭಕ್ತಾದಿಗಳು ಮುಂದಿನ ಒಂದು ವಾರದ ಕಾಲ ಮಾತಾ ವೈಷ್ಣೋದೇವಿ ಮಂದಿರದಲ್ಲಿ ನಡೆಯಲಿರುವ ಸಂಜೆಯ ದಿವ್ಯ ಆರತಿಯನ್ನು ಲೈವ್ ಆಗಿ ವೀಕ್ಷಿಸಬಹುದು. ಆದರೆ, ಒಂದು ವಾರದ ಬಳಿಕ ಈ ಆರತಿಯನ್ನು ವಿಕ್ಷೀಸಲು ಭಕ್ತಾದಿಗಳು ರೂ.30 ಶುಲ್ಕ ಪಾವತಿಸಬೇಕು.