ಬೆಂಗಳೂರು: ದಾವೋಸ್ ಪ್ರವಾಸ ಮುಗಿಸಿ ರಾಜ್ಯಕ್ಕೆ ಆಗಮಿಸಿರುವ ಬಿ.ಎಸ್. ಯಡಿಯೂರಪ್ಪನವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿಯಾಗಿದ್ದಾರೆ. ಇಂದು ಡಾಲರ್ಸ್ ಕಾಲೋನಿಯ ಸಿಎಂ ನಿವಾಸಕ್ಕೆ ಆಗಮಿಸಿರುವ ಅವರು, ಬಿಎಸ್ವೈ ಅವರ ಕುಶಲೋಪರಿ ವಿಚಾರಿಸಿದ್ದಾರೆ. ಬಳಿಕ ಸಂಪುಟ ವಿಸ್ತರಣೆ ಕುರಿತಾಗಿ ಪರಸ್ಪರ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಬಿ.ಎಲ್. ಸಂತೋಷ್ ಭೇಟಿಯಾಗಿದ್ದಾರೆ. ಸಿಎಂ ಜೊತೆ 15 ನಿಮಿಷಗಳ ಕಾಲ ಮಾತನಾಡಿದ ಸಂತೋಷ್, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕೆಂಬುದರ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಇದೇ ವೇಳೆ, ಬಿ.ಎಲ್.ಸಂತೋಷ್ ಸಿಎಂ ಬಳಿ ಸಿದ್ಧವಿರುವ ಸಚಿವ ಸಂಪುಟದ ಪಟ್ಟಿಯನ್ನು ಪಡೆದರು. ಜೊತೆಗೆ ಪಕ್ಷದ ಶಾಸಕರನ್ನು ಸೇರಿಸಿಕೊಳ್ಳುವ ಬಗ್ಗೆ ಹಾಗೂ ಸಂಪುಟ ವಿಸ್ತರಣೆ ದಿನಾಂಕದ ಬಗ್ಗೆಯೂ ಮಾತುಕತೆ ನಡೆಸಿದರು.
ಸಿಎಂ ಬಿಎಸ್ವೈ ಇನ್ನೆರಡು ದಿನಗಳಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ ಯಾರಿಗೆ ಮಂತ್ರಿಗಿರಿ ನೀಡಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.
ಇನ್ನು, ಮೂರು ದಿನದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ನಿನ್ನೆ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದರು. ಅಲ್ಲದೆ, ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಮಂತ್ರಿಸ್ಥಾನ ನೀಡಲಾಗುವುದು. ಸೋತವರಿಗೆ ಸಚಿವ ಸ್ಥಾನ ನೀಡುವ ಮಾತೇ ಇಲ್ಲ ಎಂದಿದ್ದರು. ಹೀಗಾಗಿ ಎಂಟಿಬಿ ನಾಗರಾಜ್ ಹಾಗೂ ಹೆಚ್. ವಿಶ್ವನಾಥ್ ರಾಜಕೀಯ ಭವಿಷ್ಯ ಇದೀಗ ತೂಗುಗತ್ತಿಯ ಮೇಲೆ ನಿಂತಿದೆ ಎನ್ನಲಾಗುತ್ತಿದೆ.