ಇಂದು ಸುಭಾಷ್‌ ಚಂದ್ರ ಬೋಸ್‌ ಜನ್ಮದಿನ: ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಸ್ಮರಣೆ

ಹೊಸದಿಲ್ಲಿ: ಇಂದು ಬಂಗಾಳದ ಹುಲಿ, ಅಖಂಡ ದೇಶಭಕ್ತ ಹಾಗೂ ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್‌ ಅವರ ಜನ್ಮ ವಾರ್ಷಿಕೋತ್ಸವ. ಬೋಸ್‌ ಜನ್ಮದಿನಕ್ಕೆ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಶಾ, ಸದಾನಂದಗೌಡ, ರವಿಶಂಕರ್‌ ಪ್ರಸಾದ್‌, ಕಾಂಗ್ರೆಸ್‌ ಟ್ವಿಟ್ಟರ್ ಖಾತೆ ಸೇರಿ ಅನೇಕರು ಟ್ವೀಟ್‌ ಮಾಡುವ ಮೂಲಕ ಸ್ಮರಿಸಿಕೊಂಡಿದ್ದಾರೆ.
”ನನಗೆ ನಿಮ್ಮ ರಕ್ತ ಕೊಡಿ, ಸ್ವಾತಂತ್ರ್ಯ ಕೊಡಿಸುತ್ತೇನೆ,” ಎಂದು ಗರ್ಜಿಸಿದ ಬಂಗಾಲದ ಹುಲಿ, ಅಖಂಡ ದೇಶಭಕ್ತ, ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್‌ ಅವರನ್ನು ನೆನೆದರೆ ಮೈ ರೋಮಾಂಚನಗೊಳ್ಳುತ್ತದೆ. 1897 ಜನವರಿ 23ರಂದು ಒಡಿಶಾದ ಕಟಕ್‌ ನಗರದಲ್ಲಿ ಜಾನಕಿನಾಥ್‌ ಬೋಸ್‌, ಪ್ರಭಾವತೀ ದೇವಿ ದಂಪತಿಯಲ್ಲಿ ಇವರ ಜನನವಾಗಿತ್ತು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಧೈರ್ಯ ಮತ್ತು ವಸಾಹತುಶಾಹಿಯನ್ನು ವಿರೋಧಿಸಲು ಅಳಿಸಲಾಗದ ಕೊಡುಗೆಗಾಗಿ ಭಾರತ ಯಾವಾಗಲೂ ಕೃತಜ್ಞರಾಗಿರಬೇಕು. ಅವರು ತಮ್ಮ ಸಹ ಭಾರತೀಯರ ಪ್ರಗತಿ ಮತ್ತು ಯೋಗಕ್ಷೇಮಕ್ಕಾಗಿ ನಿಂತರು ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಸುಭಾಷ್‌ ಚಂದ್ರ ಬೋಸ್‌ ತಂದೆ ಜಾನಕಿನಾಥ್‌ ಬೋಸ್‌ ಬರೆದಿದ್ದ ಡೈರಿಯ ಪುಟವೊಂದನ್ನು ಮೋದಿ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇನ್ನು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವದಂದು ನನ್ನ ಹೃತ್ಪೂರ್ವಕ ಗೌರವಗಳನ್ನು ಅರ್ಪಿಸುತ್ತೇನೆ. ನೇತಾಜಿ ಆಜಾದ್ ಹಿಂದ್ ಫೌಜ್ ಅನ್ನು ಸ್ಥಾಪಿಸಿದರು ಮತ್ತು ತಮ್ಮ ಇಡೀ ಜೀವನವನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಅರ್ಪಿಸಿದರು. ಮಾತೃಭೂಮಿಯ ಬಗೆಗಿನ ಅವರ ಉತ್ಸಾಹ ಮತ್ತು ಭಕ್ತಿ ಯಾವಾಗಲೂ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿರುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ನಮ್ಮ ಸ್ವಾತಂತ್ರ್ಯ ಹೋರಾಟದ ಅತ್ಯಂತ ಮಹತ್ವದ ನಾಯಕರಲ್ಲಿ ಒಬ್ಬರಾದ ನೇತಾಜಿ ಸುಭಾಷ್ ಚಂದ್ರಬೋಸ್ ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ. ರಾಷ್ಟ್ರದ ಬಗೆಗಿನ ಅವರ ಬದ್ಧತೆ ಮುಂದಿನ ಪೀಳಿಗೆಗೆ ಯಾವಾಗಲೂ ಪ್ರೇರಣೆಯಾಗಿರುತ್ತದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಸಹ ಟ್ವೀಟ್‌ ಮಾಡಿದ್ದಾರೆ.

ಅಲ್ಲದೆ, ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಒಂದು ನಮನ ಎಂದು ರವಿಶಂಕರ್‌ ಪ್ರಸಾದ್‌ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಸಹ ಸುಭಾಷ್‌ ಚಂದ್ರ ಬೋಸ್‌ ಜನ್ಮದಿನವನ್ನು ವಿಶಿಷ್ಟವಾಗಿ ಸ್ಮರಿಸಿಕೊಂಡಿದೆ. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮ ದಿನಾಚರಣೆಯಂದು, ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಲ್ಲಿ ಭಾರತೀಯ ಧ್ವಜವನ್ನು ಏಕೆ ಹಾರಿಸುತ್ತಾರೆಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿವರಿಸಿದ ಒಂದು ವಿಶೇಷ ಕ್ಷಣವನ್ನು ನೋಡಬಹುದು ಎಂದು ಹಳೆಯ ವಿಡಿಯೋವೊಂದನ್ನು ಕಾಂಗ್ರೆಸ್‌ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದೆ.

ಇದೇ ರೀತಿ, ದೇಶದ ಜನತೆಯೇ ನೇತಾಜಿಯನ್ನು ಸ್ಮರಿಸಿಕೊಂಡಿದ್ದು, ಅವರ ಜನ್ಮ ದಿನ ಹಿನ್ನೆಲೆ ಟ್ವೀಟ್‌ಗಳ ಮೂಲಕ ಸ್ವಾತಂತ್ರ್ಯಹೋರಾಟಗಾರನನ್ನು ಶ್ಲಾಘಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ