ಚಿತ್ರದುರ್ಗ/ಬೆಳಗಾವಿ: ಕೆಎಸ್ಆರ್ಟಿಸಿ ಕರೋನಾ ಬಸ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ಹೊತ್ತಿ ಉರಿದ ಘಟನೆ ಜಿಲ್ಲೆ ಯ ಹಿರಿಯೂರು ತಾಲೂಕಿನ ಗಿಡ್ಡೋಬನಹಳ್ಳಿ ಬಳಿ ನಡೆದಿದೆ.
ಬಸ್ ಬೆಳಗಾವಿಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಆದರೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಸುಟ್ಟು ಕರಕಲಾದ ವಸ್ತುಗಳ ದುರ್ವಾಸನೆ ಹರಡಿದ್ದರಿಂದ ಪ್ರಯಾಣಿಕರು ತಕ್ಷಣ ಚಾಲಕನಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಸಿಬ್ಬಂದಿ ಬಸ್ ನಿಲ್ಲಿಸಿ ಪರಿಶೀಲಿಸಿದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಪ್ರಯಾಣಿಕರು ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ. ಹೀಗಾಗಿ ಬೆಂಕಿ ಕಾಣಿಸಿಕೊಂಡ ಕ್ಷಣಾರ್ಧದಲ್ಲೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿಯೇ ಬಸ್ ಸಂಪೂರ್ಣ ಹೊತ್ತಿ ಉರಿದಿದೆ. ಆದರೆ ಅದೃಷ್ಟವಶಾತ್ ಬಸ್ಸಿನಲ್ಲಿದ್ದ 39 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ವಿಷಯ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿನಂದಿಸಲು ಹರಸಾಹಸ ಪಟ್ಟಿದ್ದಾರೆ. ಆದರೂ ಸಹ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಎಸ್ಪಿ ಅರುಣ್ ಹಾಗೂ ಹಿರಿಯೂರು ತಹಶೀಲ್ದಾರ್ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಚ್ಚರಿ ವಿಚಾರವೆಂದರೆ ಗಿಡ್ಡೋಬನಹಳ್ಳಿ ಹಾಗೂ ಆತಿಥ್ಯ ಹೋಟೆಲ್, ಟೋಲ್ ಗೇಟ್ ಮದ್ಯೆ ಇರುವ ಅಂತರದಲ್ಲೇ ಈ ರೀತಿಯ ಬೆಂಕಿಯ ಅವಘಡ ಎರಡನೇ ಬಾರಿಗೆ ನಡೆದಿದೆ. ಆದರೆ ಕಳೆದ ಬಾರಿ ಅವಘಡವಾದಾಗ ಐದು ಜನ ಖಾಸಗಿ ಬಸ್ಸಿನಲ್ಲಿ ಸಜೀವ ದಹನವಾಗಿದ್ದರು. ಈ ಬಾರಿ ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ.