ಕೆಎಸ್‍ಸಿಎಗೆ ಬಿಬಿಎಂಪಿಯಿಂದ 50 ಸಾವಿರ ರೂ. ದಂಡ

ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸೇರಿದ ಅಭಿಮಾನಿಗಳು ಪ್ಲಾಸ್ಟಿಕ್ ಬಳಸಿ ನಿಯಮ ಉಲ್ಲಂಘಿಸಿದ್ದಾರೆ. ಪರಿಣಾಮ ಬಿಬಿಎಂಪಿ ಕೆಎಸ್‍ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್) ಗೆ ದಂಡದ ಬರೆ ಎಳೆದಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೆಎಸ್‍ಸಿಎಗೆ 50 ಸಾವಿರ ರೂ. ದಂಡ ವಿಧಿಸಿದೆ. ಪ್ಲಾಸ್ಟಿಕ್ ಕಪ್, ಬ್ಯಾನರ್ ಬಳಸಿರುವುದಕ್ಕೆ ಆರೋಗ್ಯಾಧಿಕಾರಿಯಿಂದ ತಪಾಸಣೆ ನಡೆಸಲಾಗಿದೆ. ಈ ವೇಳೆ ಭಾರೀ ಪ್ರಮಾಣದ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದ್ದು, ಮತ್ತೆ ಮರುಕಳಿಸದಂತೆ ಸೂಚನೆ ನೀಡಿದೆ.

ಭಾನುವಾರ ಪಂದ್ಯ ನಡೆಯುವ ವೇಳೆ ಪೂರ್ವ ವಲಯದಲ್ಲಿ ಉಪ ಆರೋಗ್ಯಾಧಿಕಾರಿ ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಕಪ್ಸ್, ಫ್ಲೆಕ್ಸ್, ಬ್ಯಾನರ್ ಬಳಸಿರುವುದು ಕಂಡು ಬಂದಿದೆ. ಹೀಗಾಗಿ ಕ್ರೀಡಾಂಗಣದ ಆಡಳಿತ ಮಂಡಳಿ ಕೆಎಸ್‍ಸಿಎಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಸಾಕಷ್ಟು ಬಾರಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಿದರೂ, ಮತ್ತೆ ಪ್ಲಾಸ್ಟಿಕ್ ಬಳಸಿದ್ದಕ್ಕೆ ದಂಡ ವಿಧಿಸಲಾಗಿದೆ ಎಂದು ಪೋಸ್ಟ್ ಹಾಕಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ