ನವದೆಹಲಿ: ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿಚಾರವನ್ನು ಕೆದಕುವ ಪಾಕಿಸ್ತಾನದ ವಿಫಲ ಪ್ರಯತ್ನ ಮುಂದುವರಿದಿದೆ. ವಿಶ್ವ ಸಂಸ್ಥೆ ಭದ್ರತಾ ಮಂಡಳಿ(UNSC)ಯಲ್ಲಿ ಕಾಶ್ಮೀರ ವಿಚಾರದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತೊಂದು ಪ್ರಯತ್ನ ವಿಫಲವಾಗಿದೆ.
ಪಾಕಿಸ್ತಾನದ ಪರವಾಗಿ ಅದರ ಪರಮಾಪ್ತ ರಾಷ್ಟ್ರ ಚೀನಾ ಯುಎನ್ಎಸ್ಸಿಯಲ್ಲಿ ಕಾಶ್ಮೀರದ ಬಗ್ಗೆ ಅಪಸ್ವರ ಎತ್ತಿದೆ. ಆದರೆ, ಕಾಶ್ಮೀರವು ದ್ವಿಪಕ್ಷೀಯ ಸಮಸ್ಯೆಯಾಗಿದ್ದು ಅದರ ಚರ್ಚೆ ಈ ವೇದಿಕೆಯಲ್ಲಿ ಅಗತ್ಯವಿಲ್ಲ ಎಂದು ಮಂಡಳಿಯ ಇತರ ಸದಸ್ಯರು ಅಭಿಪ್ರಾಯಕ್ಕೆ ಬಂದರೆನ್ನಲಾಗಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಭಾರತದ ವಾದವನ್ನೇ ಪುರಸ್ಕರಿಸಿವೆ.
ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಅಭಿಪ್ರಾಯ ರೂಪಿಸಲು ಪಾಕಿಸ್ತಾನ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಚೀನಾ ಕೂಡ ಪಾಕಿಸ್ತಾನಕ್ಕೆ ಒತ್ತಾಸೆಯಾಗಿ ನಿಂತಿದೆ. ಆಗಸ್ಟ್ ತಿಂಗಳಲ್ಲಿ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷಾಧಿಕಾರ ಹಿಂಪಡೆದು ಇಬ್ಭಾಗ ಮಾಡಿತ್ತು. ಈ ಬೆಳವಣಿಗೆ ಚೀನಾ ದೇಶಕ್ಕೂ ಇರಿಸುಮುರುಸು ತಂದಿದೆ. ಇದಕ್ಕೂ ಮುನ್ನ ಆಗಸ್ಟ್ನಿಂದೀಚೆ ಅದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಎರಡು ಬಾರಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡಿತ್ತು. ಆದರೆ, ಮಂಡಳಿಯ ಇತರ ಖಾಯಂ ಸದಸ್ಯ ರಾಷ್ಟ್ರಗಳಿಂದ ಪೂರಕ ಸ್ಪಂದನೆ ಸಿಕ್ಕದೆ ಅದರ ಪ್ರಯತ್ನ ವಿಫಲಗೊಂಡಿತು. ಈ ಬಾರಿಯೂ ಅದರ ಆಸೆ ಕೈಗೂಡಿಲ್ಲ.
ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕೆಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಕ್ಕೆ ಭಾರತ ಹರ್ಷ ವ್ಯಕ್ತಪಡಿಸಿದೆ. “ಪಾಕಿಸ್ತಾನದ ಪ್ರತಿನಿಧಿಗಳು ಭಯಭೀತ ವಾತಾವರಣ ಇದೆ ಎಂದು ಬಿಂಬಿಸುತ್ತಿದ್ದಾರೆ. ವಿಶ್ವ ಸಂಸ್ಥೆಯ ವೇದಿಕೆಯಲ್ಲಿ ನಿರಂತರವಾಗಿ ನಿರಾಧಾರ ಆರೋಪಗಳನ್ನು ಮಾಡುತ್ತಾ ಬರಲಾಗಿದೆ. ಈ ಎಲ್ಲಾ ಪ್ರಯತ್ನಗಳು ತಿರಸ್ಕೃತಗೊಂಡಿರುವುದು ಸಂತೋಷ ತಂದಿದೆ” ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಸಯದ್ ಅಕ್ಬರುದ್ದೀನ್ ಪ್ರತಿಕ್ರಿಯಿಸಿದ್ದಾರೆ.
ಚೀನಾ ದೇಶವು ಪಾಕಿಸ್ತಾನದ ಪಾಲಿಗೆ ಆಲ್ ವೆದರ್ ಫ್ರೆಂಡ್ ಎನಿಸಿದೆ. ಅಂದರೆ, ಪಾಕಿಸ್ತಾನದ ಪರಮಾಪ್ತ ರಾಷ್ಟ್ರವಾಗಿದೆ. ಪಾಕಿಸ್ತಾನದಲ್ಲಿ ಚೀನಾದ ಬಹಳಷ್ಟು ಯೋಜನೆಗಳಿವೆ. ಚೀನಾದ ಕೆಲ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಪಾಕಿಸ್ತಾನದ ನೆರವು ಅತ್ಯಗತ್ಯವಿದೆ. ಇನ್ನು, ಕಾಶ್ಮೀರದಲ್ಲಿ ಚೀನಾದ ಹಿತಾಸಕ್ತಿಯೂ ಬಹಳಷ್ಟಿದೆ.
ಲಡಾಖ್ನ ಹಲವು ಭೂಭಾಗಗಳು ತನಗೆ ಸೇರಿದ್ದು ಎಂಬುದು ಚೀನಾದ ವಾದವಾಗಿದೆ. ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರವನ್ನು ವಿಭಜಿಸಿ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದು ಚೀನಾವನ್ನು ವ್ಯಗ್ರಗೊಳಿಸಿದೆ. ಜಮ್ಮು-ಕಾಶ್ಮೀರದಲ್ಲಿ ಭಾರತ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ.
ಇದು ಅಂತಾರಾಷ್ಟ್ರೀಯ ಒಪ್ಪಂದದ ಉಲ್ಲಂಘನೆಯಾಗಿದೆ. ವಿಶ್ವ ಸಂಸ್ಥೆ ಮಧ್ಯ ಪ್ರವೇಶ ಮಾಡಿ ಜಮ್ಮು-ಕಾಶ್ಮೀರದಲ್ಲಿ ಮೊದಲಿದ್ದ ಪೂರ್ವ ಸ್ಥಿತಿ ನೆಲಸುವಂತೆ ಮಾಡಬೇಕು ಎಂಬುದು ಚೀನಾದ ವಾದ.