ಇಬ್ಬರಿಗೂ ನ್ಯಾಯ? ಡಿಕೆಶಿ, ಎಂಬಿಪಿ ಇಬ್ಬರಿಗೂ ಹೊಣೆಗಾರಿಕೆ?

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಾಯಕತ್ವಕ್ಕಾಗಿ ಎರಡು ಪ್ರಬಲ ಸಮುದಾಯಗಳ ನಾಯಕರಾದ ಎಂ. ಬಿ. ಪಾಟೀಲ್‌ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ತೀವ್ರಗೊಳ್ಳುತ್ತಿರುವ ಪೈಪೋಟಿಯನ್ನು ತಪ್ಪಿಸಲು ಹೈಕಮಾಂಡ್‌ ಮಧ್ಯಮ ಮಾರ್ಗವೊಂದನ್ನು ಹುಡುಕಲು ಮುಂದಾಗಿದೆ.

ಜಾತಿ ಮತ್ತು ಪ್ರಾದೇಶಿಕ ಸೂತ್ರವನ್ನು ಮುಂದಿಟ್ಟುಕೊಂಡು ಇಬ್ಬರಿಗೂ “ಸಮಾನ ನ್ಯಾಯ’ ನೀಡುವ ನಿಟ್ಟಿನಲ್ಲಿ ಹೈಕಮಾಂಡ್‌ ಆಲೋಚಿಸುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಈ ನಡುವೆ, ಬುಧವಾರ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್‌ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಇದರೊಂದಿಗೆ ರಾಜ್ಯ ಕಾಂಗ್ರೆಸ್‌ ನಾಯಕತ್ವದ ಗೊಂದಲ ಅಂತಿಮ ಹಂತಕ್ಕೆ ತಲುಪಿದ್ದು, ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕನ ಹುದ್ದೆಗಳಿಗೆ ವಾರಾಂತ್ಯದೊಳಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಕೆಪಿಸಿಸಿ ಅಧ್ಯಕ್ಷರ ಜತೆಗೆ ವಿಭಾಗವಾರು ಕಾರ್ಯಾಧ್ಯಕ್ಷರ ನೇಮಕವೂ ಆಗುವ ಸಾಧ್ಯತೆ ಇರುವುದರಿಂದ ಯಾರೇ ಅಧ್ಯಕ್ಷರಾದರೂ ಅವರನ್ನು ನಿಯಂತ್ರಿಸಲು ಜಾತಿ ಮತ್ತು ಪ್ರಾದೇಶಿಕವಾರು ಕಾರ್ಯಾಧ್ಯಕ್ಷರ ನೇಮಕ ಮಾಡಲು ಹೈಕಮಾಂಡ್‌ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಕಾರ್ಯಾಧ್ಯಕ್ಷರ ಹುದ್ದೆಗೆ ಒತ್ತಡ
ನಾಲ್ಕು ಕಂದಾಯ ವಿಭಾಗಗಳಿಗೆ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಹೈಕಮಾಂಡ್‌ ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡುವ ಸಾಧ್ಯತೆ ಇದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಈಶ್ವರ್‌ ಖಂಡ್ರೆ ಕಾರ್ಯಾಧ್ಯಕ್ಷರಾಗಿದ್ದು, ಮುಂಬಯಿ ಕರ್ನಾಟಕಕ್ಕೆ ಸತೀಶ್‌ ಜಾರಕಿಹೊಳಿ ಅಥವಾ ಆರ್‌.ಬಿ. ತಿಮ್ಮಾಪುರ್‌, ಮೈಸೂರು ಪ್ರಾಂತ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ನೀಡಬೇಕೆಂಬ ಕಾರಣಕ್ಕೆ ಯು.ಟಿ. ಖಾದರ್‌ ಹಾಗೂ ತನ್ವೀರ್‌ ಸೇಠ್ ಹೆಸರು ಪ್ರಸ್ತಾವವಾಗಿವೆ. ಬೆಂಗಳೂರು ವಿಭಾಗಕ್ಕೆ ಕೃಷ್ಣ ಬೈರೇಗೌಡ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸೋನಿಯಾರತ್ತ ರಾಹುಲ್ಬೆಟ್ಟು ?
ಮಂಗಳವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಎದುರು ಸಿದ್ದರಾಮಯ್ಯ ಅವರು ಎಂ.ಬಿ.ಪಾಟೀಲ್‌ ಪರ ಬಲವಾಗಿ ವಾದ ಮಾಡಿ, ಜಾತಿ ಮತ್ತು ಪ್ರಾದೇಶಿಕ ಆಧಾರದಲ್ಲಿ ಎಂ.ಬಿ.ಪಾಟೀಲರ ನೇಮಕ ಪಕ್ಷಕ್ಕೆ ದೊಡ್ಡ ಶಕ್ತಿ ನೀಡುತ್ತದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗುತ್ತಿದೆ. ಅದೇ ವಾದವನ್ನು ಬುಧವಾರ ರಾಹುಲ್‌ ಗಾಂಧಿ ಮುಂದೆಯೂ ಮಂಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಅವರೊಂದಿಗೆ 15 ನಿಮಿಷ ಮಾತುಕತೆ ನಡೆಸಿದ್ದಾರೆ. ಆದರೆ ರಾಹುಲ್‌ ಗಾಂಧಿ ಸಿದ್ದರಾಮಯ್ಯ ವಾದದ ಬಗ್ಗೆ ಹೆಚ್ಚಿನ ಆಸಕ್ತಿ ತೋರದೆ, ಎಲ್ಲವನ್ನೂ ಎಐಸಿಸಿ ಅಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆನ್ನಲಾಗಿದೆ. ರಾಹುಲ್‌ ಗಾಂಧಿ ಭೇಟಿಗೆ ಸಿದ್ದರಾಮಯ್ಯ ಅವರು ತನ್ನ ಆಪ್ತ ಶಾಸಕರಾದ ಜಮೀರ್‌ ಅಹಮದ್‌, ಬೈರತಿ ಸುರೇಶ್‌, ರಾಘವೇಂದ್ರ ಹಿಟ್ನಾಳ್‌ ಅವರನ್ನು ಕರೆದುಕೊಂಡು ಹೋಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ