ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಕೇಂದ್ರ ಸರ್ಕಾರದ ಪರ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಇವತ್ತು ಮೈಸೂರಿನ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಬೆಂಬಲ ವ್ಯಕ್ತಪಡಿಸಿದರು.
ಮೋದಿ ಇಳಿಸಿ ಅನ್ನೋದು ಡರ್ಟಿ ಪಾಲಿಟಿಕ್ಸ್. ಆ ಪಾಲಿಟಿಕ್ಸ್ ಅನ್ನು ರಾಜಕಾರಣಿಗಳಿಗೆ ಮಾಡುತ್ತಿದ್ದಾರೆ ಮಾಡಲಿ. ಅದಕ್ಕೆ ವಿದ್ಯಾರ್ಥಿಗಳು ಯಾಕೆ ಹೋಗಬೇಕು? ಅವರಿಗೆ ಯಾಕೆ ಆ ಉಸಾಬರಿ? ಅವರಿಗೆ ಬೇಕಾಗಿರೋದು ಓದು, ಈ ರೀತಿಯ ಪ್ರತಿಭಟನೆ ಅಲ್ಲ ಎಂದು ತಿಳಿ ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಹಿಂದೂ ಮುಸ್ಲಿಮರ ನಡುವೆ ಒಡೆದು ಆಳುವ ನೀತಿ ಅನುಸರಿಸಿದರು. ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಜವಹರಲಾಲ್ ನೆಹರೂ ಕೂಡ ಅದೇ ತಂತ್ರ ಅನುಸರಿಸಿದರು. ಕಾಂಗ್ರೆಸ್ ಈಗಲೂ ಅದನ್ನೇ ಮಾಡುತ್ತಿದೆ. ಮುಸ್ಲಿಮರನ್ನು ವೋಟ್ ಬ್ಯಾಂಕ್ ಆಗಿ ಸೃಷ್ಟಿಸಿಕೊಂಡಿದೆ ಎಂದು ಟೀಕಿಸಿದರು. ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ. ಬಿಜೆಪಿಗೂ ಕಾಂಗ್ರೆಸ್ನ ರೋಗ ಬಂದಂತಿದೆ ಎಂದರು.
ಪ್ರಧಾನಿ ಮೋದಿ ಸನ್ಯಾಸಿ ಇದ್ದಂತೆ. ಅವರಿಗೆ ಸ್ವಂತದ್ದು ಎಂದು ಏನೂ ಇಲ್ಲ. ಅವರನ್ನು ಕೆಳಗಿಳಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪ್ರತಿಪಕ್ಷಗಳು ಸುಳ್ಳು ಹೇಳುತ್ತಿವೆ. ಸರ್ಕಾರ ಏನೇ ಮಾಡಿದರೂ ಟೀಕಿಸುವುದೇ ಪ್ರತಿಪಕ್ಷಗಳ ಕೆಲಸವಾಗಿದೆ. ಜವಾಬ್ದಾರಿಯುತ ಪ್ರತಿಪಕ್ಷಗಳು ಸರ್ಕಾರದ ಒಳ್ಳೆಯ ಕೆಲಸಗಳನ್ನು ಮೆಚ್ಚಬೇಕು. ಜವಾಬ್ದಾರಿಯುತ ಪ್ರತಿಪಕ್ಷ ಇಲ್ಲದಿರುವುದರಿಂದ ಈ ರೀತಿ ಆಗುತ್ತಿದೆ ಎಂದು ಕೇಂದ್ರದ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು.
ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮಿರ ಪೋಸ್ಟರ್ ಪ್ರದರ್ಶಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಎಲ್. ಭೈರಪ್ಪ, ಬೇರೆ ವಿವಿಯ ಗಾಳಿ ಇಲ್ಲಿಗೂ ಬೀಸಿದೆ. ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಜನರ ತೆರಿಗೆ ಹಣದಿಂದ ವಿವಿ ಗಳು ನಡೆಯುತ್ತಿವೆ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಓದಿನತ್ತ ಗಮನ ಹರಿಸಬೇಕು. ಕೇವಲ ಪ್ರತಿಭಟನೆ ಮಾಡುತ್ತಾ ಧಿಕ್ಕಾರ ಕೂಗಿದರೇ ಏನು ಪ್ರಯೋಜನ? ವಿದ್ಯಾರ್ಥಿಗಳು ತಮಗೆ ಸರಿಯಾದ ವಿದ್ಯಾಭ್ಯಾಸ ಸಿಗುತ್ತಿದೆಯಾ? ಎಂಬುದರ ಬಗ್ಗೆ ಚಿಂತೆ ಮಾಡಬೇಕು. ಆ ಜೆಎನ್ಯು ವಿದ್ಯಾರ್ಥಿಗಳಿಗೆ ಪ್ರತಿಭಟನೆ ಬಿಟ್ಟು ಬೇರೆ ಏನು ಗೊತ್ತಿಲ್ಲ ಎಂದು ಕಿಡಿಕಾರಿದರು.