ಅನುಮಾನಕ್ಕೆ ಎಡೆಮಾಡಿಕೊಟ್ಟ ಉಕ್ರೇನ್​ ವಿಮಾನ ದುರಂತ ಪ್ರಕರಣ; ಕೆನಡಾ ಬಳಿ ವರದಿ ಕೇಳಿದ ಇರಾನ್

ವಾಷಿಂಗ್ಟನ್ ​: ಬುಧವಾರ ಅಪಘಾತಕ್ಕೀಡಾಗಿ 180 ಜನರ ಸಾವಿಗೆ ಕಾರಣವಾಗಿದ್ದ ಉಕ್ರೇನ್ ವಿಮಾನ ದುರಂತದ ಬಗ್ಗೆ ಅನೇಕ ನಾಯಕರು ಅನುಮಾನ ವ್ಯಕ್ತಪಡಿಸಿದ್ದರು. ಇದು ಸುಳ್ಳು ಎಂದು ಸ್ಪಷ್ಟನೆ ನೀಡಿರುವ ಇರಾನ್​, ದುರಂತದ ಬಗ್ಗೆ ವರದಿ ನೀಡುವಂತೆ ಕೆನಡಾ ಬಳಿ ಕೇಳಿದೆ.

ಉಕ್ರೇನ್ ದೇಶದ ಅಂತಾರಾಷ್ಟ್ರೀಯ ಬೋಯಿಂಗ್ 737-800 ವಿಮಾನ ರಷ್ಯಾದ ಕೀವ್ ಎಂಬಲ್ಲಿಗೆ ಹೊರಟಿತ್ತು. ಇರಾನ್ ದೇಶದ ತೆಹ್ರಾನ್​ನ ಇಮಾಮ್ ಖೊಮೇನಿ ವಿಮಾನ ನಿಲ್ದಾಣದಲ್ಲಿ ಇಳಿದು ಮತ್ತೆ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ 180 ಜನ ಮೃತಪಟ್ಟಿದ್ದರು. ಈ ಬಗ್ಗೆ ಮಾತನಾಡಿದ್ದ ಡೊನಾಲ್ಡ್​ ಟ್ರಂಪ್​, “ಈ ವಿಮಾನ ನೆರೆಯ ರಾಷ್ಟ್ರದಲ್ಲಿ ಹಾರಾಟ ನಡೆಸುತ್ತಿತ್ತು. ಯಾರೋ ತಪ್ಪು ಮಾಡಿದ್ದಾರೆ ಎನ್ನುವ ಅನುಮಾನ ನನಗಿದೆ. ಕೆಲವರು ಈ ವಿಮಾನ ಅಪಘಾತಕ್ಕೆ ತಾಂತ್ರಿಕ ದೋಷ ಕಾರಣ ಎಂದು ಹೇಳಿದ್ದಾರೆ. ಆದರೆ, ನನಗೆ ಹಾಗೆ ಅನ್ನಿಸುವುದಿಲ್ಲ. ಭಯಾನಕ ಘಟನೆ ನಡೆದಿದೆ,” ಎಂದಿದ್ದರು.

ಇದಾದ ಬೆನ್ನಲ್ಲೇ ಇರಾನ್​ ಪ್ರಕಟಣೆಯೊಂದನ್ನು ಹೊರಡಿಸಿದೆ. “ನಾವು ವಿಮಾನವನ್ನು ಹೊಡೆದುರುಳಿಸಿಲ್ಲ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೆನಡಾ ಬಳಿ ಕೋರಿದ್ದೇವೆ. ಈ ತನಿಖೆಯಲ್ಲಿ ಅಮೆರಿಕ ಬೇಕಾದರೆ ಪಾಲ್ಗೊಳ್ಳಬಹುದು,” ಎಂದು ತಿಳಿಸಿದೆ.

ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಹತ್ಯೆಯಿಂದಾಗಿ ಕಳೆದ ಒಂದು ವಾರದಿಂದ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆಗೆ ಇರಾನ್​ ನೆಲದಲ್ಲಿ ವಿಮಾನ ನೆಲಕ್ಕುರುಳಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. “ಇರಾನ್​ ಸೇನೆ ಅಚಾನಕ್ಕಾಗಿ ಉಕ್ರೇನ್​ ವಿಮಾನವನ್ನು ಹೊಡೆದುರುಳಿಸಿದೆ,” ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ, ತನಿಖೆ ನಡೆಸಿ ವರದಿ ನೀಡಿರುವ ಇರಾನ್ ನಾಗರೀಕ ವಾಯುಯಾನ ಸಂಸ್ಥೆ, “ವಿಮಾನ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಇಂಜಿನ್​ನ ಒಂದು ಭಾಗ ಮಿತಿಮೀರಿ ಬಿಸಿಯಾಗಿದ್ದಕ್ಕೆ ಸಾಕ್ಷಿಗಳಿವೆ. ಅಲ್ಲದೆ, ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನವೇ ಬೆಂಕಿಗೆ ಆಹುತಿಯಾಗಿತ್ತು” ಎಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ