ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪುವ ಸಾಧ್ಯತೆಗಳಿವೆ. ಒಕ್ಕಲಿಗರ ಬದಲಿಗೆ ಲಿಂಗಾಯತರಿಗೆ ಮಣೆ ಹಾಕಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗುತ್ತಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾದ ಎಂ.ಬಿ. ಪಾಟೀಲ್ ಅಥವಾ ಈಶ್ವರ್ ಖಂಡ್ರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಹೌದು, ಬಿಜೆಪಿ ಬೆಂಬಲಕ್ಕೆ ನಿಂತಿರುವ ಲಿಂಗಾಯತರ ಸೆಳೆಯಲು ಕಾಂಗ್ರೆಸ್ ಹೈಕಮಾಂಡ್ ಈ ಮಾಸ್ಟರ್ ಪ್ಲಾನ್ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಲಿಂಗಾಯತ ಸಮುದಾಯದಲ್ಲಿ ಪರ್ಯಾಯ ನಾಯಕರ ಬೆಳೆಸುವ ಪ್ರಯತ್ನವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಂ.ಬಿ. ಪಾಟೀಲ್ ಅಥವಾ ಈಶ್ವರ್ ಖಂಡ್ರೆಗೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂಉತ್ತರ ಕರ್ನಾಟಕ ಭಾಗದವರಿಗೆ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಚಿಂತನೆ ನಡೆಸಲಾಗಿದೆ. ಈ ನಿರ್ಧಾರದ ಹಿಂದೆ ಸಿದ್ಧರಾಮಯ್ಯ ಬಣದ ಕೈವಾಡವಿರಬಹುದು ಎನ್ನುತ್ತಿವೆ ಮೂಲಗಳು.
ಇತ್ತೀಚೆಗಷ್ಟೇ ಡಿ.ಕೆ ಶಿವಕುಮಾರ್ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದು ಮಾತು ಕೊಟ್ಟು ಕಾಂಗ್ರೆಸ್ ಹೈಕಮಾಂಡ್ ಪೇಚಿಗೆ ಸಿಲುಕಿದೆ ಎಂಬ ಮಾತುಗಳು ರಾಜಕೀಯದಲ್ಲಿ ಕೇಳಿ ಬರುತ್ತಿದ್ದವು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಿಂದ ಬಿಡುಗಡೆಯಾಗುವ ವೇಳೆ ಹೈಕಮಾಂಡ್ ಸೋನಿಯಾ ಗಾಂಧಿ ಅವರನ್ನು ಡಿ.ಕೆ ಶಿವಕುಮಾರ್ ಭೇಟಿಯಾಗಿದ್ದರು. ಆಗ ಡಿ.ಕೆ ಶಿವಕುಮಾರ್ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದ್ದರು. ಆದರೀಗ ಡಿ.ಕೆ ಶಿವಕುಮಾರ್ಗೆ ಕರ್ನಾಟಕ ಪ್ರಾದೇಶಿಕ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಎರಡು ದಿನಗಳ ಹಿಂದೆ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು ಎನ್ನಲಾಗುತ್ತಿದೆ.
ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೆಸರು ಹೈಕಮಾಂಡ್ ಪ್ರಸ್ತಾಪ ಮಾಡಲಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದರು ಎನ್ನಲಾಗಿತ್ತು. ತನ್ನ ಆಪ್ತರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಸಿದ್ದರಾಮಯ್ಯ ಆಪ್ತರ ಹೆಸರುಗಳನ್ನುಮುಂಚೂಣಿಗೆ ತರುವಲ್ಲಿ ಯಶಸ್ವಿಯೂ ಆಗಿದ್ದರು.
ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂತೆಯೇ ದಿನೇಶ್ ಗುಂಡೂರಾವ್ ಕೂಡ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಬ್ಬರ ರಾಜೀನಾಮೆ ಅಂಗೀಕಾರ ಆಗುವ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನಕ್ಕೆ ಹೈಕಮಾಂಡ್ ಬಳಿ ಕಾಂಗ್ರೆಸ್ ನಾಯಕರು ಲಾಬಿಗೆ ಮುಂದಾಗಿದ್ದಾರೆ.
ಮಾಜಿ ಸಚಿವ ಡಿ.ಕೆ ಶಿವಕುಮಾರ್, ಎಚ್. ಕೆ ಪಾಟೀಲ್, ಕೆ. ಎಚ್ ಮುನಿಯಪ್ಪ ಕೆಪಿಸಿ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಕೆ. ಎಚ್ ಮುನಿಯಪ್ಪ ಬೆಂಬಲಕ್ಕೆ ಬಿ.ಕೆ ಹರಿಪ್ರಸಾದ್ ನಿಂತಿದ್ದು, ಎಚ್.ಕೆ ಪಾಟೀಲ್ ಬೆನ್ನಿಗೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ನಿಂತಿದ್ಧಾರೆ. ಈಗಾಗಲೇ ರಾಹುಲ್ ಭೇಟಿಗೆ ಯತ್ನಿಸಿದರೂ ವಿಫಲವಾಗಿದ್ದು, ಸೋನಿಯಾ ಗಾಂಧಿ ಅವರನ್ನಾದರೂ ಭೇಟಿಯಾಗಬೇಕೆಂದು ಮುಂದಾಗಿದ್ದಾರೆ. ಇವರ ಜತೆಗೆ ಬೆಳಗಾವಿಯ ಪ್ರಭಾವಿ ಶಾಸಕ ಸತೀಶ್ ಜಾರಕಿಹೊಳಿ ಕೂಡ ಕೆಪಿಸಿಸಿ ಸ್ಥಾನ ಆಕಾಂಕ್ಷಿಯಾಗಿದ್ದಾರೆ. ಈ ಬೆನ್ನಲ್ಲೀಗ ನಾನು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೊಸ ಬಾಂಬ್ ಸಿಡಿದ್ದಾರೆ.