ವಾಷಿಂಗ್ಟನ್; ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಹತ್ಯೆಗೆ ಪ್ರತೀಕಾರವಾಗಿ ಇರಾಕ್ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ನಡೆಸಲಾದ ಕ್ಷಿಪಣಿ ದಾಳಿಯಲ್ಲಿ ಇರಾನ್ ಸೇನೆ ಉದ್ದೇಶ ಪೂರ್ವಕವಾಗಿ ಅಮೆರಿಕ ಸೈನಿಕರ ಸಾವು–ನೋವುಗಳನ್ನು ತಪ್ಪಿಸಿದೆ ಎಂದು ಅಮೆರಿಕ ಹಾಗೂ ಯುರೋಪಿಯನ್ ಸರ್ಕಾರದ ಗುಪ್ತಚರ ಇಲಾಖೆಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಕೆಲವು ಅನಾಮಧೇಯ ಮೂಲಗಳು, “ಪ್ರತೀಕಾರದ ದಾಳಿಯ ನಂತರ ಭವಿಷ್ಯದಲ್ಲಿ ನಡೆಯಬಹುದಾದ ಅನಾಹುತವನ್ನು ತಡೆಯುವ ಸಲುವಾಗಿ ಇರಾನ್ ಸೇನೆ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ನಡೆಸಿದರೂ ಯಾವುದೇ ಸಾವು-ನೋವು ಸಂಭವಿಸದಂತೆ ಎಚ್ಚರಿಕೆ ವಹಿಸಿದೆ” ಎಂದು ವರದಿ ನೀಡಿವೆ.
ದಾಳಿಯ ಬೆನ್ನಿಗೆ ಸ್ಪಷ್ಟನೆ ನೀಡಿದ್ದ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್, “ಅಮೆರಿಕ ಮಧ್ಯ ಏಷ್ಯಾದಲ್ಲಿರುವ ತಮ್ಮ ವಾಯುನೆಲೆಗಳನ್ನು ತೆರವುಗೊಳಿಸಬೇಕು. ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ನಮ್ಮ ಪಾಲಿಗೆ ಅಮೆರಿಕದ ಸೈನಿಕರೇ ಉಗ್ರಗಾಮಿಗಳು. ಹೀಗಾಗಿ ನಾವು ಉಗ್ರಗಾಮಿಗಳ ವಿರುದ್ಧ ಹೋರಾಡುತ್ತೇವೆಯೇ ಹೊರತು, ಅಮೆರಿಕದ ವಿರುದ್ಧ ಯುದ್ಧವನ್ನು ಭಯಸುವುದಿಲ್ಲ” ಎಂದು ಹೇಳುವ ಮೂಲಕ ಯುದ್ಧವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.
ಇರಾನ್ ಸೇನೆ ಕ್ಷಿಪಣಿ ದಾಳಿಯ ದಾಳಿಯ ಸಂಬಂಧ ನಿನ್ನೆ ಸಂಜೆ ಅಮೆರಿಕ ಶ್ವೇತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ, “ಇರಾನ್ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ವಾಯುನೆಲೆಗಳಿಗೆ ಹಾನಿ ಉಂಟಾಗಿದೆಯೇ ಹೊರತು ದೇಶದ ಯಾವೊಬ್ಬ ಸೈನಿಕನೂ ಮೃತಪಟ್ಟಿಲ್ಲ. ಮಧ್ಯ ಏಷ್ಯಾದಲ್ಲಿ ಕೆಲಸ ನಿರ್ವಹಿಸುತ್ತಿರುವ ಸೈನಿಕರು ಹಾಗೂ ಅಮೆರಿಕದ ಪ್ರಜೆಗಳು ಸುರಕ್ಷಿತವಾಗಿದ್ದಾರೆ” ಎಂದು ತಿಳಿಸಿದ್ದರು. ಅಲ್ಲದೆ, ಇರಾನ್ ವಿರುದ್ಧದ ಯುದ್ಧವನ್ನು ತಳ್ಳಿ ಹಾಕಿದ್ದರು.
ಈ ಎಲ್ಲಾ ಆಗುಹೋಗುಗಳನ್ನು ಗಮನಿಸಿದರೆ ಮತ್ತೊಂದು ಯುದ್ಧಕ್ಕೆ ಸಾಕ್ಷಿಯಾಗಬಹುದಾಗಿದ್ದ ಕೊಳ್ಳಿ ರಾಷ್ಟ್ರ ಇರಾನ್ ಸೇನೆಯ ಸಮಯೋಚಿತ ನಡೆಯಿಂದ ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.