ಹನ್ನೊಂದರಲ್ಲಿ ಒಂಭತ್ತು ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್?; ಎಂಟಿಬಿ, ವಿಶ್ವನಾಥ್​ಗಿಲ್ಲ ಮಂತ್ರಿಗಿರಿ

ಬೆಂಗಳೂರು: ಉಪಚುನಾವಣೆ ಫಲಿತಾಂಶ ಬಂದು ಒಂದು ತಿಂಗಳಾದರೂ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಸಂಪುಟ ವಿಸ್ತರಣೆ ಗೋಜಿಗೆ ಹೋಗಿಲ್ಲ. ಸಂಕ್ರಾಂತಿ ವೇಳೆಗೆ ಸಂಪುಟ ವಿಸ್ತರಣೆ ಆಗಲಿದ್ದು, ಗೆದ್ದ 11 ಅನರ್ಹ ಶಾಸಕರ ಪೈಕಿ 9 ಶಾಸಕರಿಗೆ ಮಂತ್ರಿ ಸ್ಥಾನ ದೊರೆಯುವುದು ಪಕ್ಕಾ ಆಗಿದೆಯಂತೆ.
ಜನವರಿ 12 ಅಥವಾ 13ರಂದು ಬಿಎಸ್​ವೈ ಹೈಕಮಾಂಡ್​ ಭೇಟಿಗೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಈ ವೇಳೆ ತಮ್ಮ ಲೆಕ್ಕಾಚಾರವನ್ನು ಹೈಕಮಾಂಡ್​ ಎದುರಿಟ್ಟು ಒಪ್ಪಿಗೆ ಪಡೆದುಬರುವ ಆಲೋಚನೆ ಅವರದ್ದು. ಉಪಚುನಾವಣೆಗೂ ಮೊದಲು ಗೆದ್ದ ಎಲ್ಲ ಅನರ್ಹರಿಗೂ ಸಚಿವ ಸ್ಥಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಈಗ ಅವರು ತಮ್ಮ ನಿರ್ಧಾರ ಬದಲಿಸಿದ್ದು, ಗೆದ್ದು ಅರ್ಹರಾದ 11 ಶಾಸಕರ ಪೈಕಿ 9 ಶಾಸಕರಿಗೆ ಮಾತ್ರ ಮಂತ್ರಿ ಪಟ್ಟ ನೀಡಲು ನಿರ್ಧರಿಸಿದ್ದಾರೆ.
ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್​, ಎಚ್​ ವಿಶ್ವನಾಥ್​ಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎನ್ನುತ್ತಿವೆ ಮೂಲಗಳು. ಎಂಎಲ್​ಸಿ ಆಗಿ ಸಚಿವರಾಗಬಹುದು ಎನ್ನುವ ಕನಸನ್ನು ಇವರು ಕಂಡಿದ್ದರು. ಆದರೆ, ಈ ಕನಸು ನನಸಾಗುವುದು ಅನುಮಾನ ಎನ್ನಲಾಗಿದೆ. ಇನ್ನು, ಆರ್.ಶಂಕರ್ ಅವರನ್ನು ಎಂಎಎಲ್​ಸಿ ಮಾಡಿ ಮಂತ್ರಿ ಮಾಡುವ ಅನಿವಾರ್ಯತೆ ಬಿಎಸ್​ವೈಗೆ ಇದೆ. ಅಲ್ಲದೆ, ಗೆದ್ದು ಅರ್ಹ ಎನಿಸಿಕೊಂಡಿರುವ ಆರ್.ಶಂಕರ್​ಗೂ ಮಂತ್ರಿಭಾಗ್ಯ ಅನುಮಾನ. ಹೈಕಮಾಂಡ್ ಒಪ್ಪಿದರೆ ಜನವರಿ 18ರೊಳಗೆ ಸಂಪುಟ ವಿಸ್ತರಣೆ ಆಗಲಿದೆ.

ಕಾಂಗ್ರೆಸ್​​-ಜೆಡಿಎಸ್​ ಮೈತ್ರಿ ಸರ್ಕಾರ ಬಿದ್ದು, ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ರಮೇಶ್ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ರಮೇಶ್​ಗೆ ಜಲಸಂಪನ್ಮೂಲ ಖಾತೆ ನೀಡುವುದು ನಿಶ್ಚಿತವಾಗಿದೆ. ಆದರೆ, ಉಳಿದ 8 ಜನರ ಖಾತೆ ಇನ್ನೂ ಫೈನಲ್ ಆಗಿಲ್ಲ. ಬೆಳಗಾವಿಯ ಇನ್ನಿಬ್ಬರು ಶಾಸಕರಾದ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್​ಗೆ ಸಚಿವ ಸ್ಥಾನ ನೀಡುವುದು ಅನುಮಾನ ಎನ್ನಲಾಗಿದೆ. ಹೀಗಾಗಿ, ಇಬ್ಬರಿಗೂ ಮನವೊಲಿಸಿ ಬೇರೆ ಸ್ಥಾನಮಾನ ನೀಡುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ