ಬೆಂಗಳೂರು: ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗುಂದಿ ಉತ್ಸವಕ್ಕೆ ಸರ್ಕಾರ ಇದೇ ಮೊದಲ ಬಾರಿ ಸಜ್ಜಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ಉತ್ಸವ ನಡೆಯಲಿದ್ದು, ಉತ್ಸವಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಗೈರಾಗಲಿದ್ದಾರೆ.
ಐತಿಹಾಸಿಕ ಆನೆಗುಂದಿಯ ಪಾರಂಪರಿಕ ಕಟ್ಟಡ ಕಾಪಾಡುವುದರ ಜೊತೆಗೆ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿ ರೂಪುಗೊಳಿಸುವ ಉದ್ದೇಶದಿಂದ ಸರ್ಕಾರ ಈ ವರ್ಷದಿಂದ ಆನೆಗುಂದಿ ಉತ್ಸವಕ್ಕೆ ಚಾಲನೆ ನೀಡಿದೆ. ಇನ್ನು ಹಂಪಿ ಉತ್ಸವದಷ್ಟೇ ಅದ್ದೂರಿಯಾಗಿ ಈ ಬಾರಿ ಆನೆಗುಂದಿ ಉತ್ಸವವನ್ನು ನಡೆಸಲು ನಿರ್ಧರಿಸಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ವಿಶೇಷ ಮುತುವರ್ಜಿವಹಿಸಿದ್ದಾರೆ.
ಇಂದಿನಿಂದ ಆರಂಭವಾಗಲಿರುವ ಈ ಉತ್ಸವನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ಉದ್ಘಾಟಿಸಬೇಕಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಅನಿವಾರ್ಯ ಕಾರಣಗಳಿಂದ ಸಿಎಂ ಬಿಎಸ್ವೈ ಈ ಪ್ರವಾಸ ರದ್ದು ಮಾಡಿದ್ದಾರೆ. ಸಿಎಂ ಬದಲಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.