ಬೆಂಗಳೂರು, ಜ.6- ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹಿಮಾಚಲಪ್ರದೇಶದ ಇಬ್ಬರನ್ನು ಸಿಸಿಬಿ ಪೋಲೀಸರು ಬಂಧಿಸಿ 13,500 ರೂ. ಹಣ, ಎರಡು ಮೊಬೈಲ್, ಒಂದು ಸ್ವೈಪಿಂಗ್ ಮಿಷನ್ ವಶಪಡಿಸಿಕೊಂಡಿದ್ದಾರೆ.
ಹಿಮಾಚಲ ಪ್ರದೇಶದ ಮನಾಲಿಯ ಸಾಮ್ರಾಟ್ ಠಾಕೂರ್ (25) ಮತ್ತು ರಾಕೇಶ್ (22) ಬಂಧಿತರು.
ಇವರಿಬ್ಬರೂ ಬೆಂಗಳೂರಿನ ಕೋರಮಂಗಲದ 8ನೇ ಬ್ಲಾಕ್ನಲ್ಲಿ ವಾಸವಾಗಿದ್ದರು. ವಿವೇಕನಗರ ವ್ಯಾಪ್ತಿಯ ಈಜಿಪುರ, 6ನೇ ಕ್ರಾಸ್ನಲ್ಲಿರುವ ಶಾಂತಿಕ್ಲಾರ ಬಿಲ್ಡಿಂಗ್ನ ಮೊದಲ ಮಹಡಿಯಲ್ಲಿನ ಪ್ಲಾಟ್ವೊಂದರ ಕೊಠಡಿಯಲ್ಲಿ ಸ್ಪಾ ನಡೆಸುವುದಾಗಿ ಬಾಡಿಗೆಗೆ ಪಡೆದುಕೊಂಡು ಸ್ಪಾ ಹೆಸರಿನಲ್ಲಿ ಹುಡುಗಿಯರನ್ನು ಕರೆಸಿಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ಸಿಸಿಬಿ ಪೋಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೋಲೀಸರು ಸ್ಪಾ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಸಿದ್ದು ಎಂಬಾತ ತಲೆ ಮರೆಸಿಕೊಂಡಿದ್ದಾನೆ.
ಆರೋಪಿಗಳು ಒಟ್ಟಿಗೆ ಸೇರಿ ಕಡಿಮೆ ಸಮಯದಲ್ಲಿ ಸುಲಭವಾಗಿ ಹೆಚ್ಚು ಹಣಗಳಿಸುವ ಉದ್ದೇಶದಿಂದ ಸ್ಪಾವನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಆರೋಪಿಗಳ ವಿರುದ್ಧ ವಿವೇಕನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.