ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ತೀವ್ರ ಹಿನ್ನಡೆ-ಸಿಎಂ ಯಡಿಯೂರಪ್ಪ

ಬೆಂಗಳೂರು, ಜ.6-ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ತೀವ್ರ ಹಿನ್ನಡೆಯಾಗಿದ್ದು, ಆರ್ಥಿಕ ವರ್ಷ ಪೂರ್ಣಗೊಳ್ಳುವ ವೇಳೆಗೆ ಗುರಿ ಮೀರಿದ ಸಾಧನೆ ಮಾಡಲೇಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಂದು ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಮುಖ್ಯಸ್ಥರ ಜತೆ ಮಹತ್ವದ ಸಭೆ ನಡೆಸಿದ ಮುಖ್ಯಮಂತ್ರಿಗಳು. ಡಿಸೆಂಬರ್ ಅಂತ್ಯಕ್ಕೆ ಸಂಗ್ರಹವಾಗಿರುವ ಸಂಪನ್ಮೂಲಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ತೆರಿಗೆ ಸಂಗ್ರಹದಲ್ಲಿ ತೃಪ್ತಿದಾಯಕವಾಗಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದಾಗ. ಅಧಿಕಾರಿಗಳು ವಾಣಿಜ್ಯ ಮತ್ತು ವಹಿವಾಟಿನಲ್ಲಿ ಹಿನ್ನಡೆಯಾಗಿರುವುದು ಸಂಪನ್ಮೂಲ ಕ್ರೂಢೀಕರಣಕ್ಕೆ ತೊಡಕಾಗಿದೆ ಎಂದು ಸಮಜಾಯಿಷಿ ನೀಡುವ ಪ್ರಯತ್ನ ನಡೆಸಿದರು.

ಇದರಿಂದ ಸಿಟ್ಟಾದ ಮುಖ್ಯಮಂತ್ರಿಗಳು, ಕುಂಟು ನೆಪ ಹೇಳುವುದನ್ನು ಬಿಟ್ಟು ದಕ್ಷತೆಯಿಂದ ಕೆಲಸ ಮಾಡಿರಿ, ವ್ಯಾಪಾರ ವಹಿವಾಟಿನಲ್ಲಿ ಕುಂಟಿತವಾಗಿದೆ ಎಂಬುದು ನೆಪವಷ್ಟೇ. ತೆರಿಗೆ ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಪ್ರಯತ್ನ ಮಾಡುತ್ತಿಲ್ಲ. ವಸೂಲಿಯಾಗದ ತೆರಿಗೆ ವಿಷಯದಲ್ಲೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಕೇಂದ್ರ ಸರ್ಕಾರದ ಮೇಲೆ ಜವಾಬ್ದಾರಿ ಹಾಕಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಬೇಕಾದರೆ, ಅಭಿವೃದ್ಧಿಯಾಗಬೇಕಾದರೆ ಸಂಪನ್ಮೂಲ ಕ್ರೂಢೀಕರಣ ಉತ್ತಮವಾಗಿರಬೇಕು. ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಯಾವ ರೀತಿಯ ಬೆಂಬಲ ಕೊಡಲು ಸಿದ್ಧನಿದ್ದೇನೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೂ ಸರ್ಕಾರಿ ಕೆಲಸ ಮಾಡಿ ಮುಗಿಸಿದರೆ ಸಾಕು ಎಂಬ ಧೋರಣೆ ಇರುವವರಿಗೆ ಉಳಿಗಾಲ ಇಲ್ಲ. ಸಂಪನ್ಮೂಲ ಕ್ರೂಢೀಕರಣದಲ್ಲಿ ಯಾವುದೇ ರಾಜಿ ಇಲ್ಲ ಎಂದು ಯಡಿಯೂರಪ್ಪ ನಿಷ್ಟೂರವಾಗಿ ಹೇಳಿದ್ದಾರೆ.
ಅಬಕಾರಿ, ಗಣಿ ಮತ್ತು ಭೂ ಸುಧಾರಣೆ ತೆರಿಗೆಗಳು ನಿರೀಕ್ಷಿತ ಮಟ್ಟದಲ್ಲಿ ವಸೂಲಿಯಾಗುತ್ತಿವೆ. ಆದರೆ, ವಾಣಿಜ್ಯ, ಸಾರಿಗೆ , ನೋಂದಣಿ ಮತ್ತು ಮುದ್ರಾಂಕ ತೆರಿಗೆಯಲ್ಲಿ ತೀವ್ರ ಹಿನ್ನಡೆಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಸಾರಿಗೆ ಇಲಾಖೆಯಲ್ಲಿ ವಾಹನಗಳ ನೋಂದಣಿಯಲ್ಲಿ ಕುಸಿತ ಕಂಡಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆಗೊಳ್ಳುವ ಹಂತದಲ್ಲಿ ಸಹಜವಾಗಿ ತೆರಿಗೆ ಸಂಗ್ರಹ ಕುಂಟಿತಗೊಳ್ಳುತ್ತಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.

ರಿಯಲ್ ಎಸ್ಟೇಟ್ ಕೂಡ ಬಿದ್ದು ಹೋಗಿದ್ದು, ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲೂ ನಿರೀಕ್ಷಿತ ಗುರಿ ತಲುಪಲು ಕಷ್ಟವಾಗಬಹುದು ಎಂದು ಅಧಿಕಾರಿಗಳು ಹೇಳಿದರು.

ಸೋರಿಕೆಯನ್ನು ತಡೆಗಟ್ಟಿ ವಸೂಲಿ ಆಗಬೇಕಾದ ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿದರೆ ಗುರಿ ತಲುಪುವುದು ಕಷ್ಟವಲ್ಲ. ಆರ್ಥಿಕ ಇಲಾಖೆ ಬಗ್ಗೆ ನನಗೆ ಅನುಭವ ಇದೆ. ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳಿಗೆ ಕಠಿಣ ಶಬ್ಧಗಳಲ್ಲಿ ಮುಖ್ಯಮಂತ್ರಿ ಬುದ್ದಿವಾದ ಹೇಳಿದರು.

ಬಜೆಟ್ ವೇಳೆಗೆ ಸಂಪನ್ಮೂಲ ಕ್ರೂಢೀಕರಣದಲ್ಲಿ ಆಶಾದಾಯಕವಾದ ಪ್ರಗತಿ ಆಗದೇ ಇದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ. ಈಗಾಗಲೇ ಪ್ರವಾಹ, ರೈತರ ಸಾಲ ಮನ್ನಾ, ಸರ್ಕಾರಿ ನೌಕರರ ವೇತನ ಆಯೋಗ ಸೇರಿದಂತೆ ಹಲವಾರು ರೀತಿಯ ಖರ್ಚುಗಳಿಂದ ಬೊಕ್ಕಸಕ್ಕೆ ಹೊರೆಯಾಗಿದೆ.

ಜಿಎಸ್‍ಟಿಯಿಂದ ರಾಜ್ಯಕ್ಕೆ ಬರಬೇಕಾದ ಸುಮಾರು 3700ಕೋಟಿ ರೂ. ಪಾಲನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಇದರಿಂದ ಆರ್ಥಿಕ ಸಂಕಷ್ಟ ತೀವ್ರವಾಗಿದೆ. ಸ್ವಂತ ಸಂಪನ್ಮೂಲಗಳ ಕ್ರೂಢೀಕರಣದ ಮೇಲೆ ಗಮನ ಕೇಂದ್ರೀಕರಿಸಿ. ಮುಂದಿನ ತ್ರೈಮಾಸಿಕ ವೇಳೆಗೆ ಗುರಿ ಮೀರಿದ ತೆರಿಗೆ ಸಂಗ್ರಹವಾಗಬೇಕೆಂದು ಅವರು ಎಚ್ಚರಿಕೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ