ಬೆಂಗಳೂರು, ಜ.6- ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 61,245 ಕೋಟಿ ರೂ.ತೆರಿಗೆ ಸಂಗ್ರಹ ಮಾಡಿ ರಾಷ್ಟ್ರದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, 2019-20ನೇ ಸಾಲಿಗೆ 76,046 ಕೋಟಿ ವಾಣಿಜ್ಯ ಸಂಗ್ರಹದ ಗುರಿಯಿತ್ತು. ಡಿಸೆಂಬರ್ ವೇಳೆಗೆ 55,984 ಕೋಟಿ ಸಂಗ್ರಹವಾಗಿ ಶೇ.73.6ರಷ್ಟು ಗುರಿ ಸಾಧನೆಯಾಗಿದೆ ಎಂದರು.
ಜಿಎಸ್ಟಿಯಲ್ಲೂ ಶೇ.14.2ರಷ್ಟು ಬೆಳವಣಿಗೆಯಾಗಿದೆ. 2020ರ ಏಪ್ರಿಲ್ 1ರಿಂದ ಜಿಎಸ್ಟಿ ಪಾವತಿಯ ಹೊಸ ನಮೂನೆಗಳು ಜಾರಿಗೆ ಬರಲಿವೆ. ಇವುಗಳ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಈ ನಮೂನೆಗಳ ಪರಿಕ್ಷಾರ್ಥ ಪ್ರಯೋಗದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಸ್ಗಳ ಮೂಲಕ ಸರಕು ಸಾಗಾಣಿಕೆ ಮಾಡಿ ತೆರಿಗೆ ವಂಚಿಸಲಾಗುತ್ತಿದೆ. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ತೆರಿಗೆ ವಂಚನೆಯಾಗುತ್ತಿದೆ. ಸರಕು ಸಾಗಾಣಿಕೆ ಮೇಲೆ ಕಳೆದ ತಿಂಗಳು ಸುಮಾರು 2500 ಪರಿಶೀಲನೆಗಳು ನಡೆದಿವೆ. ಇನ್ನು ಮುಂದೆ ಮತ್ತಷ್ಟು ಪರಿಶೀಲನೆ ನಡೆಯಬೇಕು. ತೆರಿಗೆ ವಂಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗುಪ್ತಚರ ಮತ್ತು ಕಾರ್ಯಾಚರಣೆ ಪಡೆ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕೆಂದು ಯಡಿಯೂರಪ್ಪ ಸಲಹೆ ನೀಡಿದರು.
ಮುಂದಿನ ಮೂರು ತಿಂಗಳಲ್ಲಿ ಹೆಚ್ಚಿನ ಶ್ರಮವಹಿಸಿ ಗುರಿ ಮೀರಿದ ತೆರಿಗೆ ಸಂಗ್ರಹ ಮಾಡಿ ಎಂದರು.
ಅಬಕಾರಿ ಇಲಾಖೆಯಲ್ಲಿ ಈ ವರ್ಷ 20,950ಕೋಟಿ ತೆರಿಗೆ ಸಂಗ್ರಹದ ಗುರಿ ನಿಗದಿಯಾಗಿತ್ತು. ಈವರೆಗೂ 16,188 ಕೋಟಿ ರೂ. ಸಂಗ್ರಹವಾಗಿ ಶೇ.77.23ರಷ್ಟು ಸಾಧನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1165.33 ಕೋಟಿಗೂ ಹೆಚ್ಚು ಸಂಗ್ರಹವಾಗಿದ್ದು, ಶೇ.7.76ರಷ್ಟು ಬೆಳವಣಿಗೆ ಕಂಡಿದೆ ಎಂದು ವಿವರಿಸಿದರು.
ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೆ ಗುರಿ ಸಾಧನೆಯಾಗಿದೆ. ಅಬಕಾರಿ ಇಲಾಖೆಯ 39 ಸೇವೆಗಳನ್ನು ಸಕಾಲದ ವ್ಯಾಪ್ತಿಗೆ ತರಲಾಗಿದೆ. 25 ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸಲಾಗಿದೆ. ಚಿಲ್ಲರೆ ಮಾರಾಟ ಲೈಸೆನ್ಸ್, ಮದ್ಯ ಉತ್ಪಾದನಾ ಘಟಕಗಳ ಲೈಸೆನ್ಸ್ಗಳನ್ನು ಆನ್ಲೈನ್ ಮೂಲಕವೇ ನವೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಾರಿಗೆ ಇಲಾಖೆಗೆ 7,100 ಕೋಟಿ ತೆರಿಗೆ ಸಂಗ್ರಹದ ಗುರಿ ಇತ್ತು. 6,602 ಕೋಟಿ ರೂ. ಸಾರಿಗೆ ಸಂಸ್ಥೆಗಳಿಂದ 498ಕೋಟಿ ಆದಾಯದ ಗುರಿ ಇತ್ತು. ಈವರೆಗೂ 4,864 ಕೋಟಿ ಸಂಗ್ರಹವಾಗಿದೆ. ವಾಹನಗಳ ಮಾರಾಟ ಕುಸಿತವಾಗಿರುವುದರಿಂದ 460 ಕೋಟಿ ಕೊರತೆಯಾಗಿದೆ. ವರ್ಷಾಂತ್ಯಕ್ಕೆ ಸುಮಾರು 300 ಕೋಟಿ ಕೊರತೆಯಾಗುವ ಸಾಧ್ಯತೆ ಇದೆ. ಮೋಟಾರು ಕಾಯ್ದೆ ಉಲ್ಲಂಘನೆ ಮತ್ತು ತೆರಿಗೆ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು. ಕೊರತೆಯ ತೆರಿಗೆ ಸಂಪನ್ಮೂಲಗಳನ್ನು ಬೇರೆ ಮೂಲಗಳಿಂದ ಸಂಗ್ರಹಿಸುವುದಾಗಿ ಹೇಳಿದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 11,828 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿಯಾಗಿದ್ದು, ಈವರೆಗೆ 8,297 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 410 ಕೋಟಿ ಹೆಚ್ಚು ಸಂಗ್ರಹವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.