![gopalaya](http://kannada.vartamitra.com/wp-content/uploads/2018/08/gopalaya-600x381.jpg)
ಬೆಂಗಳೂರು, ಜ.6-ನನಗೆ ಇಂತಹದ್ದೇ ಖಾತೆ ಬೇಕು ಎಂದು ಮುಖ್ಯಮಂತ್ರಿಯವರ ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ. ಅವರು ಏನೇ ಜವಾಬ್ದಾರಿ ವಹಿಸಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧನುರ್ಮಾಸ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗುವುದು 100ಕ್ಕೆ ನೂರರಷ್ಟು ಖಚಿತ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.
ನಮಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಸಂಪೂರ್ಣವಾದ ವಿಶ್ವಾಸವಿದೆ. ಉಪಚುನಾವಣೆಯಲ್ಲಿ ಗೆದ್ದಿರುವ ಎಲ್ಲರೂ ಸಚಿವರಾಗುವ ಸಂಭವವಿದೆ ಎಂದು ಹೇಳಿದರು.
ನನ್ನ ಕ್ಷೇತ್ರ ಹಾಗೂ ಬೆಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅವರು ಯಾವುದೇ ಖಾತೆ ಕೊಟ್ಟರೂ ನಾನು ನಿಭಾಯಿಸಲು ಸಿದ್ಧನಿದ್ದೇನೆ.
ಸಚಿವ ಸಂಪುಟ ವಿಸ್ತರಿಸುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಅದರಲ್ಲೂ ಯಡಿಯೂರಪ್ಪನವರು ನಾಲ್ಕು ದಶಕಗಳ ರಾಜಕೀಯ ಅನುಭವವನ್ನು ಹೊಂದಿದ್ದಾರೆ.ಯಾವ ಸಂದರ್ಭದಲ್ಲಿ ಯಾವ ತೀರ್ಮಾನ ಕೈಗೊಳ್ಳಬೇಕು ಎಂದು ಅವರಿಗೆ ಗೊತ್ತು ಎಂದು ಹೇಳಿದರು.
ಉಪಚುನಾವಣೆಯಲ್ಲಿ ಗೆದ್ದಿರುವ ಎಲ್ಲರೂ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಗೋಪಾಲಯ್ಯ ಪುನರುಚ್ಚರಿಸಿದರು.