ವಿಜಯ್ ಮಲ್ಯರಿಗೆ ಕಾನೂನು ಹೋರಾಟದಲ್ಲಿ ಮತ್ತೊಂದು ಭಾರೀ ಹಿನ್ನಡೆ

ನವದೆಹಲಿ, ಜ.6-ರಾಷ್ಟ್ರೀಕೃತ ಬ್ಯಾಂಕುಗಳಿಂದ 9,000 ಕೋಟಿ ರೂ.ಗಳನ್ನು ಪಡೆದು ಉದ್ದೇಶಪೂರ್ವಕ ಸುಸ್ತಿದಾರರಾಗಿ ಇಂಗ್ಲೆಂಡ್‍ನಲ್ಲಿ ನೆಲೆಸಿರುವ ಆರ್ಥಿಕ ಅಪರಾಧಿ ಮತ್ತು ಕಳಂಕಿತ ಮದ್ಯೋದ್ಯಮಿ ವಿಜಯ್ ಮಲ್ಯರಿಗೆ ಕಾನೂನು ಹೋರಾಟದಲ್ಲಿ ಮತ್ತೊಂದು ಭಾರೀ ಹಿನ್ನಡೆಯಾಗಿದೆ.

ಆಸ್ತಿಗಳ ಜಪ್ತಿಗಳು ಮತ್ತು ದಿವಾಳಿತನ ಕುರಿತ ವಿಚಾರಣೆಗೆ ಅಡ್ಡಿ ಉಂಟು ಮಾಡಲು ವಿಜಯ ಮಲ್ಯ ಇತರ ನ್ಯಾಯಲಯಗಳಲ್ಲಿ ಇರುವ ಅರ್ಜಿಗಳ ಇತ್ಯರ್ಥ ಬಾಕಿ ಕಾರಣವನ್ನು ಬಳಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಸ್ಪಷ್ಟಪಡಿಸಿದೆ. ಇದರಿಂದಾಗಿ ಸಾಲ ವಸೂಲಾತಿಗಾಗಿ ಕಳಂಕಿತ ಉದ್ಯಮಿಯ ಆಸ್ತಿಗಳನ್ನು ಜಫ್ತಿ ಮಾಡಲು ಮತ್ತು ದಿವಾಳಿತನ ಪ್ರಕರಣ ವಿಚಾರಣೆಯನ್ನು ಸುಗಮವಾಗಿ ಮುಂದುವರಿಸಲು ಸರ್ವೋನ್ನತ ನ್ಯಾಯಾಲಯ ಅನುವು ಮಾಡಿಕೊಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು ಇಂದು ಈ ಸಂಬಂಧ ಆದೇಶ ಹೊರಡಿಸಿದೆ. ದಿವಾಳಿತನ ಪ್ರಕರಣದ ವಿಚಾರಣೆ ಕುರಿತ ತೀರ್ಪಿನಿಂದ ಇಂಗ್ಲೆಂಡ್ ಕೋರ್ಟ್ ನನ್ನು ತಡೆಯಲು ಇತ್ಯರ್ಥಕ್ಕೆ ಬಾಕಿ ಉಳಿದಿರುವ ಪ್ರಕರಣವನ್ನು ಮಲ್ಯ ಬಳಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

ಸಾಲ ವಸೂಲಾತಿಗಾಗಿ ತಮ್ಮ ಮತ್ತು ತಮ್ಮ ಸಂಬಂಧಿಕರ ಆಸ್ತಿ-ಪಾಸ್ತಿಗಳ ಜಪ್ತಿ ಮಾಡುವುದಕ್ಕೆ ತಡೆ ನೀಡುವಂತೆ ಕೋರಿ ವಿಜಯ್ ಮಲ್ಯ ಜೂ.27ರಂದು ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದ್ದರು.

ಕಳೆದ ವಾರವಷ್ಟೇ ಮುಂಬೈನ ವಿಷೇಷ ನ್ಯಾಯಾಲಯವೊಂದು ಮಲ್ಯರ ಆಸ್ತಿಯನ್ನು ಹರಾಜು ಮಾಡುವ ಪ್ರಕ್ರಿಯೆ ಕೈಗೊಳ್ಳಲು ಸ್ಟೇಟ್ ಬ್ಯಾಂಕ್ ಇಂಡಿಯಾ(ಎಸ್‍ಬಿಐ) ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ ಅವಕಾಶ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ