ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ತೈಲ ಮತ್ತು ಚಿನ್ನದ ಬೆಲೆಗಳು ಗಗನಕ್ಕೇರುತ್ತಿವೆ. ಷೇರುಪೇಟೆ ತಲ್ಲಣಗೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಕೂಡ ದುಬಾರಿಯಾಗಲಿದೆ. ಭಾರತದ ಮಾರುಕಟ್ಟೆಯ ಮೇಲೂ ನಿರೀಕ್ಷೆಯಂತೆ ಹೊಡೆತ ಬಿದ್ದಿದೆ.
ಭಾರತದಲ್ಲಿ 10 ಗ್ರಾಮ್ ಚಿನ್ನದ ಬೆಲೆ ಎರಡು ದಿನದಲ್ಲಿ 1,700ಕ್ಕೂ ಹೆಚ್ಚು ಹೆಚ್ಚಳ ಕಂಡಿದೆ. ಸೆನ್ಸೆಕ್ಸ್ ಕುಸಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ. ಪೆಟ್ರೋಲ್ ಬೆಲೆ ಹೆಚ್ಚಾಗುವ ಭೀತಿ ಇದೆ.
ಭಾರತದಲ್ಲಿ ಶುಕ್ರವಾರ 10 ಗ್ರಾಮ್ ಚಿನ್ನದ ಬೆಲೆ 850 ರೂ ಏರಿಕೆ ಕಂಡಿತ್ತು. ಇವತ್ತು 918 ರೂಪಾಯಿ ಹೆಚ್ಚಳವಾಗಿದೆ. ಅಲ್ಲಿಗೆ ಎಂಸಿಎಕ್ಸ್ ಮಾರುಕೆಟ್ಟೆಯ ದರದಂತೆ 10 ಗ್ರಾಮ್ ಚಿನ್ನದ ಬೆಲೆ 41,030 ರೂ ಮುಟ್ಟಿದೆ. ಬೆಳ್ಳಿಯ ಬೆಲೆ ಕೂಡ ಹೆಚ್ಚಿದೆ. ಒಂದು ಕಿಲೋ ಬೆಳ್ಳಿ ಈಗ 48,474 ರೂಪಾಯಿ ಬೆಲೆಗೆ ಏರಿದೆ.
ಇನ್ನು, ಭಾರತದ ಷೇರು ಮಾರುಕಟ್ಟೆ ಕೂಡ ತತ್ತರಿಸುತ್ತಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 500 ಅಂಕಗಳಷ್ಟು ಕುಸಿತ ಕಂಡು 41,087.95 ಮಟ್ಟ ಮುಟ್ಟಿದೆ. ಇನ್ನು, ಎನ್ಎಸ್ಇ ನಿಫ್ಟಿ ಸೂಚ್ಯಂಕ ಕೂಡ ಇವತ್ತು 109.60 ಅಂಕ ಕಳೆದುಕೊಂಡಿದೆ. ನಿಫ್ಟಿ ಈಗ 12,117 ಅಂಕಗಳನ್ನ ಹೊಂದಿದೆ.
ಎಸ್ಬಿಐ, ಐಸಿಐಸಿಐ, ಹೆಚ್ಡಿಎಫ್ಸಿ, ಮೊದಲಾದ ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಸಂಸ್ಥೆಗಳ ಷೇರುಗಳು ಬೆಲೆ ಕುಸಿತ ಕಂಡಿದೆ. ಆಟೊಮೊಬೈಲ್ ಕ್ಷೇತ್ರದ ಮಾರುತಿ, ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಗಳ ಷೇರುಗಳು, ಟಾಟಾ ಸ್ಟೀಲ್, ಎನ್ಟಿಪಿಸಿ ಸಂಸ್ಥೆಯ ಷೇರುಗಳೂ ಕಡಿಮೆ ಮೊತ್ತಕ್ಕೆ ಬಿಕರಿಯಾಗಿವೆ. ಟೈಟಾನ್, ಹೆಚ್ಸಿಎಲ್ ಟೆಕ್, ಇನ್ಫೋಸಿಸ್, ಟೆಕ್ ಮಹೀಂದ್ರ ಸಂಸ್ಥೆಯ ಷೇರುಗಳು ಲಾಭ ಮಾಡಿಕೊಂಡಿವೆ.
ಇದೇ ವೇಳೆ, ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 72 ರೂ ಗಡಿ ದಾಟಿ ಹೋಗಿದೆ. ಒಂದು ಡಾಲರ್ಗೆ 72.03 ರೂಪಾಯಿ ದರ ಇದೆ.
ಈಗ ಜಾಗತಿಕ ತೈಲ ಬೆಲೆಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇನ್ನಷ್ಟು ತುಟ್ಟಿಯಾಗಲಿವೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಒಂದು ಲೀಟರ್ ಪೆಟ್ರೋಲ್ ಬೆಲೆ 78.28 ರೂ ಇದೆ. ಸದ್ಯದಲ್ಲೇ ಇದು 80 ರೂಪಾಯಿ ಮಟ್ಟ ಮುಟ್ಟುವ ಸಾಧ್ಯತೆ ಇದೆ.