ಬೆಂಗಳೂರು: ಸುಂಕದಕಟ್ಟೆ ಸಮೀಪದ ಕೊಟ್ಟಿಗೆಪಾಳ್ಯದ ಬಳಿ ಇವತ್ತು ನಡೆದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಿಎಂಟಿಸಿ ಬಸ್ನ ಬ್ರೇಕ್ ವೈಫಲ್ಯವು ಈ ಘಟನೆಗೆ ಕಾರಣವಾಗಿರುವುದು ತಿಳಿದುಬಂದಿದೆ. ಆದರೆ, ಆ ನತದೃಷ್ಟ ಬಸ್ಸಿನ ಡ್ರೈವರ್ ವೆಂಕಟೇಶ್ ಅವರು ಸಮಯಪ್ರಜ್ಞೆ ತೋರದೇ ಹೋಗಿದ್ದರೆ ಇನ್ನೂ ದೊಡ್ಡ ಅನಾಹುತವಾಗುತ್ತಿತ್ತೆನ್ನಲಾಗುತ್ತಿದೆ. ಬ್ರೇಕ್ ಫೇಲ್ ಆಗಿರುವುದು ತಿಳಿಯುತ್ತಿದ್ದಂತೆಯೇ ವೆಂಕಟೇಶ್ ಅವರು ಜನಸಂದಣಿ ಇರುವ ಬಸ್ ನಿಲ್ದಾಣದ ಬದಲು ಬಲಕ್ಕೆ ಬಸ್ಸನ್ನು ತಿರುಗಿಸಿದ್ದಾರೆ. ಇದರಿಂದ ದೊಡ್ಡ ಅಪಾಯ ತಪ್ಪಿದೆ.
ಬೆಳಗ್ಗೆ 9ಗಂಟೆಗೆ ಈ ಅವಘಡ ಸಂಭವಿಸಿದೆ. ಸುಂಕದಕಟ್ಟೆಯಿಂದ ಕೊಟ್ಟಿಗೆ ಪಾಳ್ಯದ ಕಡೆ ಹೋಗುತ್ತಿದ್ದಾಗ ಸಿಗ್ನಲ್ ಬಳಿ ಈ ಬಸ್ನ ಬ್ರೇಕ್ ಫೇಲ್ಯೂರ್ ಆಗಿದೆ. ಡ್ರೈವರ್ ವೆಂಕಟೇಶ್ ಹೇಳುವ ಪ್ರಕಾರ, ಬಸ್ಸು ಮುಂದೆ ಹೋಗಿದ್ದರೆ ಕೊಟ್ಟಿಗೆಪಾಳ್ಯ ಬಸ್ ನಿಲ್ದಾಣದತ್ತ ಸಾಗಬೇಕಿತ್ತು. ಬಸ್ ನಿಲ್ದಾಣದಲ್ಲಿ ಸುಮಾರು 200 ಮಂದಿ ಇದ್ದರು. ನಾನು ಕೂಡಲೇ ಬಸ್ಸನ್ನು ಬಲಕ್ಕೆ ಎಳೆದೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಬಲಕ್ಕೆ ತಿರುಗಿಸದೇ ನೇರವಾಗಿ ಹೋಗಿದ್ದರೆ ಹಲವು ಜನರನ್ನು ಈ ಬಸ್ಸು ಆಹುತಿ ತೆಗೆದುಕೊಳ್ಳುವ ಅಪಾಯವಿತ್ತೆನ್ನಲಾಗಿದೆ.
ಡ್ರೈವರ್ ವೆಂಕಟೇಶ್ ಅವರು ಇನ್ನೂ ಒಂದು ಪ್ರಮುಖ ವಿಚಾರ ಹೊರಗೆಡವಿದ್ದಾರೆ. ಈ ಬಿಎಂಟಿಸಿ ಬಸ್ಸು ಬ್ರೇಕ್ ಫೇಲ್ಯೂರ್ ಆಗಿದ್ದು ಅಚಾನಕ್ಕಾಗಿಯಲ್ಲ. ಹಲವು ದಿನಗಳಿಂದಲೂ ಈ ಬಸ್ಸಿನ ಬ್ರೇಕ್ ಕಂಡೀಷನ್ ಸರಿ ಇರಲಿಲ್ಲ. ಕಳೆದ 15 ದಿನಗಳಿಂದ ವೆಂಕಟೇಶ್ ಅವರು ನಿತ್ಯವೂ 35ನೇ ನಂಬರ್ ಕನ್ನಳ್ಳಿ ಡಿಪೋಗೆ ಹೋಗಿ ಬ್ರೇಕ್ ಸರಿ ಇಲ್ಲದಿರುವುದನ್ನು ತಿಳಿಸುತ್ತಿದ್ದರು. ಈ ಗಾಡಿಯ ಬ್ರೇಕ್ ಸರಿಯಿಲ್ಲ. ಬೇರೆ ವಾಹನ ಕೊಡಿ ಎಂದು ಇವರು ಹೇಳುತ್ತಿದ್ದರಂತೆ. ಆದರೆ, ಇವರ ಮಾತಿಗೆ ತಲೆಕೆಡಿಸಿಕೊಳ್ಳದ ಬಿಎಂಟಿಸಿ ಅಧಿಕಾರಿಗಳು, ಏನಾಗಲ್ಲ ಇದೇ ಬಸ್ಸು ತೆಗೆದುಕೊಂಡು ಹೋಗು ಎಂದು ಉದ್ಧಟತನ ತೋರುತ್ತಿದ್ದರೆನ್ನಲಾಗಿದೆ.
ಇದೇ ವೇಳೆ, ಇವತ್ತು ಸಂಭವಿಸಿದ ಅಪಘಾತದಲ್ಲಿ ಮೃತ ಪಟ್ಟವರನ್ನು ಬೈಲಪ್ಪ(43) ಮತ್ತು ಆರಾದ್ಯ(46) ಎಂದು ಗುರುತಿಸಲಾಗಿದೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಅಭಿಷೇಕ್, ಹರ್ಷಿತ್(23) ಮತ್ತು ನಾಗರಾಜ್(34) ಅವರಿಗೆ ಗಂಭೀರ ಗಾಯಗಳಾಗಿವೆ ಎಂಬ ಮಾಹಿತಿ ತಿಳಿದುಬಂದಿದೆ.