ಡಿ.ಕೆ. ಶಿವಕುಮಾರ್‌ಗೆ ಇಡಿ ಸಮನ್ಸ್‌: ದೆಹಲಿಗೆ ವಿಚಾರಣೆಗೆ ಬರುವಂತೆ ಸೂಚನೆ

ಬೆಂಗಳೂರು: ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ‌.ಶಿವಕುಮಾರ್‌ಗೆ ಸಮನ್ಸ್‌ ಜಾರಿಗೊಳಿಸಿದ್ದಾರೆ. ಜನವರಿ 13ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದಾರೆ.

ಡಿ.ಕೆ. ಶಿವಕುಮಾರ್ ನಡೆಸಿದ ವ್ಯವಹಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶದಿಂದ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಲಾಗಿದೆ. ಅಲ್ಲದೆ, ಇಡಿ ವಿಚಾರಣೆಗೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಗೆ ಆಗಮಿಸುವಂತೆ ಮಾಜಿ ಸಚಿವ ಡಿಕೆಶಿಗೆ ಸೂಚನೆ ನೀಡಿದೆ. ಈ ಹಿನ್ನೆಲೆ ಡಿಕೆ ಶಿವಕುಮಾರ್ ತಡರಾತ್ರಿ ದೆಹಲಿಯಲ್ಲಿ ವಕೀಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಾಗೇ ದೆಹಲಿ ಹೈಕೋರ್ಟ್‌ನಲ್ಲೂ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್‌ ನಾಯಕ ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸೋಮವಾರ ಸುಪ್ರೀಂಕೋರ್ಟ್ ಡಿಕೆಶಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಲಿದೆ. ಐಟಿ ಅಧಿಕಾರಿಗಳು 120ಬಿ ಅಡಿ ಪ್ರಕರಣ ದಾಖಲಿಸಿದ್ದು, ಹೈಕೋರ್ಟ್‌ನಲ್ಲಿ ಡಿಕೆಶಿ ಅರ್ಜಿ ವಜಾಗೊಂಡಿತ್ತು. ಈ ಹಿನ್ನೆಲೆ 120ಬಿ ಸೆಕ್ಷನ್ ಕೈಬಿಡುವಂತೆ ಸುಪ್ರೀಂಕೋರ್ಟ್‌ಗೆ ಡಿಕೆಶಿ ಪರ ವಕೀಲರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಸೋಮವಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ