ಟೆಹರಾನ್,ಜ.3-ಇರಾನ್ ಇಸ್ಲಾಮಿಕ್ ರೆವಿಲ್ಯೂಷನರಿ ಕುಡ್ಸ್ ಪೋರ್ಸ್ನ ಮಹಾಮುಖ್ಯಸ್ಥ ಖಾಸೆಮ್ ಸೊಲೇಮಾನಿ ಅಮೆರಿಕ ಸೇನಾಪಡೆಯ ವಾಯುದಾಳಿಯಲ್ಲಿ ಹತರಾದ ನಂತರ ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ.
ಖಾಸೆಮ್ ಹತ್ಯೆ ನಂತರ ಹಾಂಗ್ಕಾಂಗ್ ಸೇರಿದಂತೆ ಪ್ರಮುಖ ನಗರಗಳಲ್ಲಿನ ತೈಲ ಬೆಲೆಯಲ್ಲಿ ಶೇ.4ರಷ್ಟು ಆರಂಭಿಕ ಹೆಚ್ಚಳ ಕಂಡುಬಂದಿತು. ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಿಗೆ ಇರಾನ್ ತೈಲವನ್ನು ಪೂರೈಸುತ್ತಿದೆ. ಅಮೆರಿಕ ಸೇನಾಪಡೆ ವಾಯುದಾಳಿ ಹಿನ್ನೆಲೆಯಲ್ಲಿ ತಮ್ಮ ಸೇನಾ ಮುಖ್ಯಸ್ಥ ಹತರಾದ ನಂತರ ಇರಾನ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕ ಮೇಲೆ ಸೇಡು ತೀರಿಸಿಕೊಳ್ಳುವ ಜೊತೆಗೆ ಅದರ ಮಿತ್ರ ರಾಷ್ಟ್ರಗಳಿಗೆ ತೈಲ ಪೂರೈಕೆಯನ್ನು ಸ್ಥಗಿತಗೊಳಿಸಿ ಬಿಸಿ ಮುಟ್ಟಿಸಲು ನಿರ್ಧರಿಸುವ ಸಾಧ್ಯತೆ ಇದೆ.
ಇದಕ್ಕೆ ಪೂರ್ವಭಾವಿಯಾಗಿ ತೈಲ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದಿನ ಕಚ್ಚಾತೈಲ ವಹಿವಾಟಿನಲ್ಲಿ ಏರಿಕೆ ಕಂದುಬಂದಿದ್ದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈ ಮಧ್ಯೆ ಇರಾನ್ ಅಧ್ಯಕ್ಷ ಹಸನ್ ರೌಹನಿ,ನಮ್ಮ ಯೋಧರು ಮತ್ತು ನಮ್ಮ ಮಿತ್ರ ರಾಷ್ಟ್ರಗಳ ಸೇನಾಪಡೆ ಅಮೆರಿಕ ವಿರುದ್ಧ ಭಾರೀ ಸೇಡು ತೀರಿಸಿಕೊಳ್ಳಲಿವೆ ಎಂದು ಘೋಷಿಸಿದ್ದಾರೆ.
ಅತ್ತ ಇರಾಕ್ನಲ್ಲಿ ಜನರಲ್ ಖಾಸೆಮ್ರನ್ನು ಅಮೆರಿಕ ಸೇನಾಪಡೆಗಳು ಹತ್ಯೆ ಮಾಡಿದ್ದಕ್ಕೆ ವಿಜಯೋತ್ಸವ ಆಚರಿಸಲಾಗುತ್ತಿದ್ದು, ಅಲ್ಲಿನ ಯೋಧರು ಮತ್ತು ನಾಗರಿಕರು ಬೀದಿಗಿಳಿದು ಇರಾನ್ ಸೇನಾ ಮುಖ್ಯಸ್ಥನ ಸಾವಿಗೆ ಸಂಭ್ರಮ ಆಚರಿಸುತ್ತಿವೆ.