ಮುಂಬೈ,ಜ.3-ಪಾಕಿಸ್ತಾನಿ ಉಗ್ರರನ್ನು ದೃತಿಗೆಡಿಸಲು ಅಥವಾ ಅಸ್ಥಿರಗೊಳಿಸಲು ಸೇನಾಪಡೆಗಳ ಸರ್ಜಿಕಲ್ ಸ್ಟ್ರೈಕ್ ವಿಫಲವಾಗಿದೆ ಎಂದು ಶಿವಸೇನೆ ಆರೋಪಿಸಿದೆ.
2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಂಬಕೊಚ್ಚಿಕೊಳ್ಳುತ್ತಿದೆ. ಭಯೋತ್ಪಾದಕರು ನಿರ್ಮೂಲನೆಯಾಗಿದ್ದಾರೆ ಎಂಬ ಭ್ರಮೆಯಲ್ಲಿದೆ. ಆದರೆ ವಾಸ್ತವ ಸಂಗತಿ ಎಂದರೆ ಸರ್ಜಿಕಲ್ ಸ್ಟ್ರೈಕ್ನಿಂದ ಪಾಕ್ ಉಗ್ರರ ಹುಟ್ಟಡಗಿಲ್ಲ ಎಂದು ಶಿವಸೇನೆ ದೂರಿದೆ.
ಶಿವಸೇನೆ ಮುಖವಾಣಿ ಸಾಮ್ನಾ(ಮರಾಠಿ ದಿನಪತ್ರಿಕೆ)ದ ಸಂಪಾದಕೀಯದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದ್ದು, ಸರ್ಜಿಕಲ್ ಸ್ಟ್ರೈಕ್ನಿಂದ ಜಮ್ಮು ಮತ್ತು ಕಾಶ್ಮೀರದ ಗಡಿಭಾಗ ಮತ್ತು ಪ್ರಾಂತ್ಯದಲ್ಲಿ ಉಗ್ರರ ಉಪಟಳ ನಿಂತಿಲ್ಲ. ಅಲ್ಲದೆ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿಲ್ಲ ಎಂದು ಹೇಳಿದೆ.
ಹೊಸ ವರ್ಷದ ಮುನ್ನಾ ದಿನ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದ ಮುಂಬೈನ ಯೋಧ ಹುತಾತ್ಮನಾಗಿದ್ದಾನೆ. ಕೇವಲ ಒಂದು ತಿಂಗಳಲ್ಲೇ ಮಹಾರಾಷ್ಟ್ರದ 9 ಯೋಧರು ಮೃತಪಟ್ಟಿದ್ದಾರೆ. ಪಾಕಿಸ್ತಾನ ಉಗ್ರರು ಮತ್ತೆ ಸಕ್ರಿಯರಾಗಿದ್ದು ದುಷ್ಕøತ್ಯಗಳನ್ನು ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಉಗ್ರರನ್ನು ನಿರ್ಮೂಲನೆ ಮಾಡಿರುವುದಾಗಿ ಕೊಚ್ಚಿಕೊಳ್ಳುತ್ತಿದೆ ಎಂದು ಸಾಮ್ನಾ ಆರೋಪಿಸಿದೆ.