ಅಗತ್ಯವಿದ್ದರೆ ಪಿಒಕೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲು ಸಿದ್ಧ

ನವದೆಹಲಿ,ಜ.3- ಅಗತ್ಯವಿದ್ದರೆ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲು ನಾವು ಸದಾ ಸಿದ್ಧ ಎಂದು ಭಾರತೀಯ ಭೂ ಸೇನೆಯ ನೂತನ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದ್ದಾರೆ.

ಗಡಿಭಾಗದಲ್ಲಿ ಭಯೋತ್ಪಾದಕರ ಹುಟ್ಟಡಗಿಸಲು ಮತ್ತು ಪಾಕಿಸ್ತಾನಿ ಯೋಧರ ಪುಂಡಾಟವನ್ನು ಹತ್ತಿಕ್ಕಲು ನಾವು ಸರ್ವ ಸನ್ನದ್ದರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ವಾರ್ತಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಮತ್ತು ಪಾಕ್ ಸೇನೆಯ ಕದನ ವಿರಾಮ ಉಲ್ಲಂಘನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ಭಾರೀ ಸೇನಾ ಕಾರ್ಯಾಚರಣೆ ನಡೆಸಲು ಪರಿಸ್ಥಿತಿ ಎದುರಾದರೆ ಅದಕ್ಕೆ ಸರ್ವಸನ್ನದ್ಧ. ಹಾಗೇನಾದರೂ ನಡೆದಲ್ಲಿ ಇದು ಇಂದೆಂದಿಗಿಂತಲೂ ಅತಿದೊಡ್ಡ ಸೇನಾ ಕಾರ್ಯಾಚರಣೆಯಾಗಲಿದೆ ಎಂದು ಅವರು ತಿಳಿಸಿದರು.

ಗಡಿಭಾಗದಲ್ಲಿ ಪಾಕ್ ಉಗ್ರರು ಭಾರತದೊಳಗೆ ನುಸುಳದಂತೆ ಜಮ್ಮುಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ಗಡಿಭಾಗಗಳಲ್ಲಿ ನಮ್ಮ ಯೋಧರ ಕಟ್ಟೆಚ್ಚರದ ಕಣ್ಗಾವಲಿನ ನಿಗಾವಹಿಸಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭಾರತದ ಯಾವುದೇ ಪ್ರದೇಶದ ಮೇಲೆ ದಾಳಿ ನಡೆಸಲು ಕುತಂತ್ರ ರೂಪಿಸುವ ಪಾಕ್ ಉಗ್ರಗಾಮಿಗಳ ವಿರುದ್ದ ಸೇನಾ ಕಾರ್ಯಾಚರಣೆ ನಡೆಸಲು ನಾವು ಅವಕಾಶ ಹೊಂದಿದ್ದೇವೆ. ಕೇಂದ್ರ ಸರ್ಕಾರ ಸೂಚನೆ ನೀಡಿದರೆ ಮತ್ತು ಪರಿಸ್ಥಿತಿ ಉದ್ಭವಿಸಿದರೆ ಪಿಓಕೆ ಮೇಲೆ ಮತ್ತೊಂದು ಭಾರೀ ಸರ್ಜಿಕಲ್ ಸ್ಟ್ರೈಕ್ ನಡೆಸಲು ಸಿದ್ಧ ಎಂದು ಎಂ.ಎನ್.ನರವಣೆ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ