ನವದೆಹಲಿ:ಲಷ್ಕರ್ ಎ ತೊಯ್ಬಾದ(ಎಲ್ ಇಟಿ) ಭಯೋತ್ಪಾದಕನನ್ನು ಭದ್ರತಾ ಪಡೆ ಶುಕ್ರವಾರ ತಡರಾತ್ರಿ ಜಮ್ಮು-ಕಾಶ್ಮೀರದ ಗಂದೇರ್ ಬಾಲ್ ನಲ್ಲಿ ಬಂಧಿಸಿರುವ ಘಟನೆ ನಡೆದಿದೆ.
ಲಷ್ಕರ್ ಉಗ್ರ ನಿಸ್ಸಾರ್ ಅಹ್ಮದ್ ದಾರ್ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿದ್ದಿರುವುದಾಗಿ ವರದಿ ತಿಳಿಸಿದೆ. ಈತ ಹಲವು ಬಾರಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ಮೂಲಗಳು ಹೇಳಿರುವುದಾಗಿ ವರದಿ ವಿವರಿಸಿದೆ.
ಆಸ್ಪತ್ರೆಯೊಂದರಲ್ಲಿ ಹಾಜರಿದ್ದಾನೆ ಎಂಬ ಖಚಿತ ಸುಳಿವಿನ ಮೇರೆಗೆ ಶ್ರೀನಗರ್ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ದಾರ್ ನನ್ನು ಬಂಧಿಸಿದ್ದು, ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಭಾರತೀಯ ಭದ್ರತಾ ಪಡೆಯ ಅಧಿಕಾರಿಗಳು ಎಲ್ ಇಟಿ ಉಗ್ರ ದಾರ್ ನ ವಿಚಾರಣೆ ನಡೆಸುತ್ತಿದ್ದಾರೆ. ಪಾಕಿಸ್ತಾನ ಬೆಂಬಲಿತ ಹಲವಾರು ಉಗ್ರಗಾಮಿ ಸಂಘಟನೆಗಳು ಶ್ರೀನಗರದಲ್ಲಿ ಕಾರ್ಯಾಚರಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.