ಕೋದಂಡರಾಮ ದೇವಸ್ಥಾನದ ಪಂಚಲೋಹಗಳ ಗೋಪುರ ಕಳಶ ಕಳುವು

ರಾಮೇಶ್ವರಂ, ಜ.3- ತಮಿಳುನಾಡಿನ ಐತಿಹಾಸಿಕ ನಗರಿ ರಾಮೇಶ್ವರಂನ ಪ್ರಸಿದ್ಧ ಕೋದಂಡರಾಮ ದೇವಸ್ಥಾನದ ಲಕ್ಷಾಂತರ ರೂ. ಮೌಲ್ಯದ ಪಂಚಲೋಹಗಳ ಗೋಪುರ ಕಳಶ ಕಳುವಾಗಿದೆ.

ಇದನ್ನು ನಿನ್ನೆ ಮಧ್ಯರಾತ್ರಿಯಿಂದ ಇಂದು ಮುಂಜಾನೆ ಅವಧಿಯೊಳಗೆ ಕಳ್ಳತನ ಮಾಡಿದ್ದು, ರಾಮೇಶ್ವರಂ ಸಮೀಪದಲ್ಲಿರುವ ಶ್ರೀಲಂಕಾಗೆ ಕಳ್ಳಸಾಗಣೆ ಮಾಡಿರುವ ಶಂಕೆ ಇದೆ ಎಂದು ಪೋಲೀಸರು ತಿಳಿಸಿದ್ದಾರೆ.

ಭಾರತದ ಪ್ರಸಿದ್ಧ ದೇವಸ್ಥಾನಗಳ ಗೋಪುರ ಕಳಶಗಳನ್ನು ಶ್ರೀಲಂಕಾ ಸಿಂಗಪೂರ್, ಮಲೇಷಿಯಾ ಮತ್ತು ಕಾಂಬೋಡಿಯಾ ದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಪಂಚಲೋಹಗಳಿಂದ ನಿರ್ಮಾಣವಾಗಿರುವ ಈ ಪ್ರಾಚೀನ ಕಳಶಗಳು ದೈವಿಕ ಶಕ್ತಿ ಹೊಂದಿದ್ದು, ಧನಕನಕಾದಿ ಐಶ್ವರ್ಯಗಳನ್ನು ಪ್ರಾಪ್ತಿ ಮಾಡುತ್ತದೆ ಎಂಬ ನಂಬಿಕೆಯಿಂದಾಗಿ ತಮಿಳುನಾಡಿನ ಪ್ರಖ್ಯಾತ ದೇಗುಲಗಳಿಂದ ಕಳಶಗಳನ್ನು ಕಳವು ಮಾಡಿ ಏಷ್ಯಾದ ವಿವಿಧ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಪೋಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂತಹ ಕಳಶಗಳು ಏಷ್ಯಾ ಮಾರುಕಟ್ಟೆಯಲ್ಲಿ 10 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೂ ಬೆಲೆ ಬಾಳುತ್ತವೆ ಎಂದು ಅಂದಾಜು ಮಾಡಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೆ ರಾಮೇಶ್ವರಂನ ಕೋದಂಡರಾಮ ದೇವಸ್ಥಾನದಲ್ಲಿ ಸಹಸ್ರಾರು ರೂ. ಹಣವಿದ್ದ ಹುಂಡಿಗಳನ್ನು ಕಳವು ಮಾಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ