ನವದೆಹಲಿ, ಜ.2-ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ನಿಧಿ (ಯೂನಿಸೆಫ್) ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳು ಕಂಡು ಬಂದಿವೆ.
ಜನವರಿ ಒಂದರಂದು ಭಾರತವು 67,385 ನವಜಾತ ಶಿಶುಗಳನ್ನು ಸ್ವಾಗತಿಸಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.
ಚೀನಾ (46,299), ನೈಜೀರಿಯಾ (26,639), ಪಾಕಿಸ್ತಾನ (16,787), ಇಂಡೋನೇಷಿಯಾ (13,020) ಹಾಗೂ ಅಮೆರಿಕಾ (10,450) ನಂತರದ ಸ್ಥಾನದಲ್ಲಿವೆ ಎಂದು ಯೂನಿಸೆಫ್ ತಿಳಿಸಿವೆ.
2020ರ ಜನವರಿ ಒಂದರಂದು ಪೆಸಿಫಿಕ್ ದ್ವೀಪರಾಷ್ಟ್ರ ಫಿಜಿಯಲ್ಲಿ ಮೊದಲ ಮಗು ಜನಿಸಿದೆ. ಹೊಸ ವರ್ಷದ ಮೊದಲ ದಿನದ ಕಟ್ಟಕಡೆ ಕ್ಷಣದಲ್ಲಿ ಜನಿಸಿದ ಮಗು ಅಮೆರಿಕದ್ದಾಗಿದೆ.
ಭಾರತದ ರಾಜಧಾನಿ ದೆಹಲಿ, ಮುಂಬೈ ಮೊದಲಾದ ನಗರಗಳಲ್ಲೂ ಹೊಸ ವರ್ಷದ ಜನವರಿ ಒಂದರಂದು ಅನೇಕ ಮಕ್ಕಳು ಜನಿಸಿವೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಬಹುತೇಕ ಗರ್ಭವತಿ ಮಹಿಳೆಯರು ಜನವರಿ ಒಂದರಂದೇ ತಮ್ಮ ಶಿಶುಗಳು ಜನಿಸಲು ಸಿಜೇರಿಯನ್ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ತಮ್ಮ ಮಕ್ಕಳ ಜನ್ಮ ದಿನವನ್ನು ಆಚರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಅನೇಕ ದಂಪತಿಗಳು ಜನವರಿ ಒಂದರಂದೇ ತಮ್ಮ ಮಕ್ಕಳು ಜನಿಸಲು ಸಿಜೇರಿಯನ್ ಶಸ್ತ್ರ ಚಿಕಿತ್ಸೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.