ಬೆಂಗಳೂರು, ಜ.3- ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ಕರ್ನಾಟಕಕ್ಕೆ ಕೊಡಬೇಕಾದ ಅನುದಾನ ಕೊಡದಿದ್ದರೂ ಪಾಕಿಸ್ತಾನದ ಮೇಲೆ ಪ್ರೀತಿ ಉಕ್ಕುತ್ತಿರುವುದೇಕೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
25 ಸಂಸದರನ್ನು ಕೊಟ್ಟ ರಾಜ್ಯದಲ್ಲಿ ಉಂಟಾದ ಪ್ರವಾಹದ ಹಾನಿಯಿಂದ 35ಸಾವಿರ ಕೋಟಿ ನಷ್ಟವಾಗಿದ್ದರೂ ಕೊಟ್ಟಿದ್ದು ಬಿಡಿಗಾಸು ಎಂದು ಟ್ವಿಟರ್ನಲ್ಲಿ ಆರೋಪಿಸಿದ್ದಾರೆ.
ನರೇಗಾ ಯೋಜನೆಯ ಬಾಕಿ ಹಣವನ್ನು ಕೊಟ್ಟಿಲ್ಲ. ಬರಪೀಡಿತ ಪ್ರದೇಶಗಳಿಗೂ ಪರಿಹಾರ ನೀಡಿಲ್ಲ. ಇವುಗಳ ಬಗ್ಗೆ ಮಾತನಾಡಲಾಗದ ಪ್ರಧಾನಿಯವರಿಗೆ ಪಾಕಿಸ್ತಾನದ ಬಗ್ಗೆ ಏಕೆ ಮಮಕಾರ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ಜಪ ಮಾಡುವುದನ್ನು ನಿಲ್ಲಿಸಲಿ. ಕರ್ನಾಟಕಕ್ಕೆ ಬರಬೇಕಾದ ಹಣ ಕೊಡಿ, ಕೇಂದ್ರ ಸರ್ಕಾರ ಕಟ್ಟಿಸಿಕೊಂಡಿರುವ ತೆರಿಗೆಯಲ್ಲಿ ರಾಜ್ಯದ ಪಾಲನ್ನು ಹಾಗೂ ನೆರೆ ಪರಿಹಾರದ ಹಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪಾಕಿಸ್ತಾನವನ್ನು ಕೇಳಬೇಕೋ ಅಥವಾ ಭಾರತೀಯ ಮತದಾರರಿಂದ ಆಯ್ಕೆಯಾದ ನಿಮ್ಮನ್ನು ಕೇಳಬೇಕೋ ಎಂದು ಪ್ರಧಾನಿಯವರನ್ನು ಎಚ್ಡಿಕೆ ಪ್ರಶ್ನಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಪದೇ ಪದೇ ಪಾಕಿಸ್ತಾನದ ಜಪ ಮಾಡುವ ಮೋದಿ ಅವರು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ಪ್ರಧಾನಿಯೋ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ನಿರಾಶ್ರಿತರು ನಿಮಗೆ ಮತ ನೀಡಿದರೋ ಅಥವಾ ಭಾರತದ ಪ್ರಜೆಗಳು ನಿಮಗೆ ಮತ ನೀಡಿದ್ದಾರೋ ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಭಾರತೀಯರ ಮತ ಪಡೆದು ಸಂವಿಧಾನದ ಪ್ರಕಾರ ಪ್ರಧಾನಿಯಾಗಿರುವ ನಿಮಗೆ ರಾಜ್ಯಗಳ ಅಭಿವೃದ್ಧಿಯ ಆದ್ಯತೆಯೋ ಅಥವಾ ಪಾಕಿಸ್ತಾನದವರಿಗೆ ಪೌರತ್ವ ನೀಡುವುದು ನಿಮ್ಮ ಆದ್ಯತೆಯೋ ಎಂದು ಪ್ರಶ್ನೆಗಳ ಸುರುಮಳೆಗೈದಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರ ಗದ್ದುಗೆಗೆ ನಮಿಸಿ ನಂತರ ಮಾತನಾಡಿದ ಭಾಷಣದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಏನಾದರೂ ಸಲಹೆ ಕೊಟ್ಟಿದ್ದೀರಾ ಎಂದು ಮೋದಿಯವರನ್ನು ಪ್ರಶ್ನಿಸಿದ್ದಾರೆ.