ಪ್ರದಾನಿಯವರಿಂದ ರಾಜ್ಯಕ್ಕೆ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಅಪಮಾನ-ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು, ಜ.3- ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡದೆ ಕರ್ನಾಟಕ ರಾಜ್ಯಕ್ಕೆ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರವಾಹದಿಂದಾಗಿ 22 ಜಿಲ್ಲೆಗಳ 103 ತಾಲ್ಲೂಕುಗಳ ಜನ ಸಂಕಷ್ಟಕ್ಕೀಡಾಗಿದ್ದರು. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಪರಿಹಾರ ನೀಡಬೇಕೆಂಬ ಬೇಡಿಕೆಗಳು ನಿರಂತರವಾಗಿ ಕೇಳಿ ಬಂದಿದ್ದವು. ರಾಜ್ಯ ಸರ್ಕಾರ ಕೂಡ 38ಸಾವಿರ ಕೋಟಿರೂ. ನಷ್ಟವಾಗಿದೆ ಎಂದು ವರದಿ ನೀಡಿದೆ. 1200 ಕೋಟಿ ರೂ.ಗಳನ್ನು ಕೊಟ್ಟಿದ್ದು ಬಿಟ್ಟರೆ ಕೇಂದ್ರ ಸರ್ಕಾರ ಈವರೆಗೂ ನೆರೆ ಹಾವಳಿಗೆ ಹೆಚ್ಚಿನ ಪರಿಹಾರ ಕೊಟ್ಟಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖುದ್ದಾಗಿ ಪ್ರಧಾನಿ ಬಳಿ ನಿನ್ನೆ ವೇದಿಕೆ ಮೆಲೆಯೇ ವಿಷಯ ಪ್ರಸ್ತಾಪಿಸಿ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ ಎಂದರು.

ಜವಾಬ್ದಾರಿಯುತ ಪ್ರಧಾನಿಯವರು ಮುಖ್ಯಮಂತ್ರಿಯವರ ಮನವಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಬೇಕಿತ್ತು ಅಥವಾ ಸ್ಥಳದಲ್ಲೇ ಪರಿಹಾರ ಘೋಷಣೆ ಮಾಡಬೇಕಿತ್ತು. ಆದರೆ, ಇದ್ಯಾವುದನ್ನೂ ಮಾಡಲಿಲ್ಲ. ಅನಂತರ ರಾಜಭವನದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನೆರೆ ಪೀಡಿತರ ಸಮಸ್ಯೆ ಬಗೆಹರಿಸಲು ಯಡಿಯೂರಪ್ಪ ಪ್ರಯತ್ನಿಸಿದ್ದಾರೆ. ಆದರೆ, ಅದಕ್ಕೂ ಪ್ರಧಾನಿ ಅವಕಾಶ ಮಾಡಿಕೊಟ್ಟಿಲ್ಲ. ಈ ಮೂಲಕ ಯಡಿಯೂರಪ್ಪ ಅವರನ್ನು ಅವಮಾನಿಸಲಾಗಿದೆ. ರಾಜ್ಯದ ಜನರಿಗೂ ಅಪಮಾನವಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದ್ದು, ತಾರತಮ್ಯ ನೀತಿ ಅನುಸರಿಸುತ್ತಿದೆ. 25 ಮಂದಿ ಸಂಸದರನ್ನು ಗೆಲ್ಲಿಸಿಕೊಟ್ಟ ಕರ್ನಾಟಕಕ್ಕೆ ಮೇಲಿಂದ ಮೇಲೆ ಅವಮಾನವಾಗುತ್ತಿದೆ ಎಂದರು.

ಜಿಎಸ್‍ಟಿ ತೆರಿಗೆಯಲ್ಲಿ ಸರಿಯಾದ ಪಾಲು ನೀಡುತ್ತಿಲ್ಲ. ನೆರೆ ಪರಿಹಾರ ನೀಡುತ್ತಿಲ್ಲ. ಮಹದಾಯಿ ನದಿ ವಿವಾದ ಬಗೆಹರಿಸುತ್ತಿಲ್ಲ. ಉದ್ದೇಶ ಪೂರ್ವಕವಾಗಿಯೇ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ ಎಂದು ಕಿಡಿ ಕಾರಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ಬರಲಿ ಎಂಬ ಕಾರಣಕ್ಕಾಗಿ ಮೋದಿ ಅವರು ರಾಜ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ ಎನಿಸುತ್ತಿದೆ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ಬಿಜೆಪಿಯಲ್ಲಿ ಒಂದು ಗುಂಪು ಪ್ರಯತ್ನಿಸುತ್ತಿದೆ. ಅದಕ್ಕೆ ತಕ್ಕಂತೆ ಮೋದಿ ಅವರು ನಡೆದುಕೊಳ್ಳುತ್ತಿದ್ದಾರೆ ಎಂದರು.

ವಿರೋಧಪಕ್ಷವಾಗಿ ಕಾಂಗ್ರೆಸ್ ನೆರೆ ಸಂತ್ರಸ್ತರ ಪರವಾಗಿ ಹಲವಾರು ಬಾರಿ ಪ್ರತಿಭಟನೆ ನಡೆಸಿದೆ. ಆದರೆ, ದಪ್ಪ ಚರ್ಮದ ಬಿಜೆಪಿ ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿನ್ನೆ ತುಮಕೂರಿನ ಸಿದ್ದಗಂಗಾ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಅವರು ರಾಜಕೀಯ ಭಾಷಣ ಮಾಡಿದ್ದಾರೆ. ಮಕ್ಕಳ ತಲೆಯಲ್ಲಿ ಪಾಕಿಸ್ತಾನದ ವಿರುದ್ಧ ದ್ವೇಷದ ವಿಷ ಬೀಜ ಬಿತ್ತುವ ಪ್ರಯತ್ನ ಮಾಡಿದ್ದಾರೆ. ಮಕ್ಕಳ ಮುಂದೆ ಅಸೂಕ್ಷ್ಮವಾಗಿ ಮಾತನಾಡಿದ್ದಾರೆ. ಮಕ್ಕಳ ಓದು, ಭವಿಷ್ಯದ ಬಗ್ಗೆ ಹಿತವಚನ ಹೇಳುವ ಬದಲು ಸಿಎಎ, ಎನ್‍ಆರ್‍ಸಿ ಹಾಗೂ ಪಾಕಿಸ್ತಾನದ ಬಗ್ಗೆ ಮಾತನಾಡಿರುವುದು ವಿಷಾದನೀಯ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ. ಅದನ್ನು ವಿರೋಧ ಮಾಡುವುದನ್ನು ಮೋದಿ ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ. ಪಾಕಿಸ್ತಾನ ದುಷ್ಟ ದೇಶ. ಅಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳವಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಹಾಗೆಯೇ ಭಾರತದಲ್ಲಿನ ಅಲ್ಪಸಂಖ್ಯಾತರಿಗೆ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆಯಲ್ಲ. ಇದಕ್ಕೆ ಉತ್ತರ ನೀಡುವವರು ಯಾರು ? ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು ಸಂವಿಧಾನದಲ್ಲಿ ಅವಕಾಶ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಅದಕ್ಕಾಗಿ ಮೋದಿ ಅವರು ನೆರೆ ಸಂತ್ರಸ್ತರಿಗೆ ನೆರವು ನೀಡಲು ಹಿಂದೇಟು ಹಾಕುತ್ತಿರಬಹುದು. ದೇಶದಲ್ಲಿ ನಾನಾ ರೀತಿಯ ಸಮಸ್ಯೆಗಳಿವೆ. ಅವುಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುವ ಬದಲಾಗಿ ಕೇವಲ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ತಮ್ಮ ಭಾಷಣದ ಪ್ರಾವಿಣ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.

ಪ್ರಧಾನಿಯವರನ್ನು ಪ್ರಶ್ನೆ ಮಾಡಿದರೆ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದೆಯೇ ಎಂದು ಬಿಜೆಪಿಯವರು ಪ್ರಶ್ನೆ ಮಾಡುತ್ತಾರೆ. ನೈತಿಕತೆ ಎನ್ನುವುದು ಎಲ್ಲಿ ಸಿಗುತ್ತದೆ. ಅದು ಬಿಜೆಪಿಯವರ ಬಳಿ ಇದೆಯೇ ಎಂದು ಪ್ರಶ್ನಿಸಿದರು.

ಪ್ರತಿಭಟನೆ ವೇಳೆ ಹಾನಿಯಾದ ಆಸ್ತಿಗಳ ನಷ್ಟವನ್ನು ಪ್ರತಿಭಟನೆ ನೇತೃತ್ವ ವಹಿಸಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ವಸೂಲಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದು ಕಾನೂನು ಬಾಹೀರ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು. ಆಡಳಿತ ನಿರ್ವಹಣೆಯೂ ಚೆನ್ನಾಗಿತ್ತು. ಅದಕ್ಕಾಗಿ ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಇದರಲ್ಲಿ ಈಗಿನ ಸರ್ಕಾರದ ಪಾತ್ರ ಇಲ್ಲ ಎಂದು ಅವರು ಹೇಳಿದರು.

ಸ್ಪೀಕರ್ ವಿರುದ್ಧ ಅಸಮಾಧಾನ:
ವಿರೋಧ ಪಕ್ಷದ ನಾಯಕನಾದ ತಮಗೆ ಅಗತ್ಯ ಸೌಲಭ್ಯ ನೀಡದೆ ವಿಧಾನಸಭಾಧ್ಯಕ್ಷರು ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ