ಬೆಂಗಳೂರು,ಜ.3- ಧನುರ್ಮಾಸ ಹಾಗೂ ಮುಖ್ಯಮಂತ್ರಿ ವಿದೇಶಿ ಪ್ರವಾಸ ಸೇರಿದಂತೆ ನಾನಾ ಕಾರಣಗಳಿಂದ ಮುಂದೂಡಲಾಗಿದೆ ಎನ್ನಲಾಗುತ್ತಿದ್ದ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಮತ್ತೆ ಸದ್ದು ಮಾಡುತ್ತಿದೆ.
ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂ ಯಡಿಯೂರಪ್ಪನವರಿಗೆ ನೂತನ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ ಇದೇ ತಿಂಗಳು ಜನವರಿಯಲ್ಲೇ ಸಚಿವ ಸಂಪುಟ ಮಾಡುವ ಸಲುವಾಗಿ ಸಿಎಂ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಅಮಿತ್ ಷಾ ಜತೆಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಬಿಜೆಪಿ ಹೈಕಮಾಂಡ್ ಜತೆ ಚರ್ಚಿಸುವ ಸಲುವಾಗಿ ಸದ್ಯದಲ್ಲೇ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರೊಂದಿಗೆ ಬಿ.ಎಸ್ ಯಡಿಯೂರಪ್ಪ ಈ ಬಗ್ಗೆ ಚರ್ಚಿಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ರಾಜ್ಯ ಪ್ರವಾಸ ಮುಗಿದ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಅನುಮೋದನೆ ಪಡೆಯಲು ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಮಕರ ಸಂಕ್ರಾಂತಿ ಬಳಿಕ ಜನವರಿ 16 ಮತ್ತು 19ರ ನಡುವೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಜನವರಿ 14 ರಂದು ಧನುರ್ಮಾಸ ಕೊನೆಗೊಳ್ಳಲಿದ್ದು, ಜನವರಿ 15ಕ್ಕೆ ಮಕರ ಸಂಕ್ರಾಂತಿ ಹಬ್ಬವಿದೆ. ಮುಖ್ಯಮಂತ್ರಿ ವಿದೇಶಿ ಪ್ರವಾಸಕ್ಕೂ ಮುಂಚಿತವಾಗಿ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗುತ್ತಿದೆ.
ಕ್ಯಾಬಿನೆಟ್ ವಿಸ್ತರಣೆಯ ನಿಖರವಾದ ದಿನಾಂಕ ಮತ್ತು ಸಮಯವನ್ನು ಯಡಿಯೂರಪ್ಪ ರಹಸ್ಯವಾಗಿಟ್ಟು, ಜನವರಿ 20 ರೊಳಗೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದೊಳಗಿನ ಮೂಲಗಳು ತಿಳಿಸಿವೆ.
ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹುದ್ದೆ ಮೇಲೆ ಹಲವರು ಕಣ್ಣಿಟ್ಟಿರುವುದೇ ಇದಕ್ಕೆ ಕಾರಣವಾಗಿದೆ. ಮೈತ್ರಿ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ ರಮೇಶ್ ಜಾರಕಿಹೊಳಿ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹಾಗೂ ಬಳ್ಳಾರಿಯ ಶ್ರೀರಾಮುಲು ಉಪಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದಾರೆ. ಇನ್ನೂ ಮೂರು ಡಿಸಿಎಂಗಳನ್ನು ಸೇರಿಸಿದರೆ ಅದು ತುಂಬಾ ಅಸಹ್ಯಕರವಾಗಿರುತ್ತದೆ ಎಂದು ಪಕ್ಷದೊಳಗಿನವರೇ ಹೇಳುತ್ತಾರೆ.
ಆಂಧ್ರಪ್ರದೇಶದಲ್ಲಿ ಐದು ಉಪಮುಖ್ಯಮಂತ್ರಿಗಳಿದ್ದಾರೆ. ಇವರು ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತ್ತಾರೆ ಆದರೆ ಅದು ರಾಷ್ಟ್ರೀಯ ಪಕ್ಷವಲ್ಲ ಎಂದು ವೀಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟವನ್ನು ಬರೀ ವಿಸ್ತರಣೆ ಮಾಡುವುದೋ? ಅಥವಾ ಸಂಪುಟ ಪುನಾರಚನೆ ಮಾಡಬೇಕೋ ಎಂಬುದರ ಬಗ್ಗೆ ನಿರ್ಧಾರ ಮಾಡುವುದು ಯಡಿಯೂರಪ್ಪನವರಿಗೆ ಕಷ್ಟವಾಗುತ್ತಿದೆ.
ಉಪಚುನಾವಣೆಯಲ್ಲಿ ಗೆದ್ದು ಅರ್ಹರಾಗಿರುವ ಶಾಸಕರು ದೊಡ್ಡ ದೊಡ್ಡ ಖಾತೆಗಳನ್ನೇ ಕೇಳುತ್ತಿದ್ದಾರೆ. ಈಗ ಅವರು ಕೇಳುತ್ತಿರುವ ಖಾತೆಗಳನ್ನು ಬಿಜೆಪಿಯ ಹಿರಿಯ ಮುಖಂಡರು ನಿರ್ವಹಿಸುತ್ತಿದ್ದಾರೆ. ಆ ಖಾತೆಗಳನ್ನು ಅವರಿಂದ ಹಿಂಪಡೆದು ಇವರಿಗೆ ಕೊಡಬೇಕೋ? ಅಥವಾ ತಮ್ಮ ಬಳಿ ಇರುವ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಿ ಅವರನ್ನು ಸಮಾಧಾನ ಪಡಿಸಬೇಕೋ ಎಂಬುದರ ಬಗ್ಗೆ ಸ್ಪಷ್ಟ ನಿಲುವು ತಳೆದಿಲ್ಲ.
ಬೆಂಗಳೂರು ನಗರದ ನಂತರದ ಅತಿದೊಡ್ಡ ಜಿಲ್ಲೆ ಅಂದ್ರೆ ಬೆಳಗಾವಿ. 18 ವಿಧಾನಸಭೆ ಕ್ಷೇತ್ರಗಳಿರುವ ಈ ಜಿಲ್ಲೆಗೆ ಎಷ್ಟು ಮಂತ್ರಿ ಸ್ಥಾನ ನೀಡಬೇಕು ಎಂಬ ಚಿಂತೆ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ಉಪಚುನಾವಣೆಯಲ್ಲಿ ಗೆದ್ದಿರುವ 3 ಜನರಿಗೂ ಮಂತ್ರಿ ಸ್ಥಾನ ನೀಡಿದರೆ ಅಸಮಾಧಾನ ಹೆಚ್ಚಾಗುವ ಸಾಧ್ಯತೆ ಇದೆ.
ಶಶಿಕಲಾ ಜೊಲ್ಲೆ ಅವರನ್ನು ಸಂಪುಟದಿಂದ ಕೈ ಬಿಟ್ಟು ಅವರ ಸ್ಥಾನದಲ್ಲಿ ಉಮೇಶ ಕತ್ತಿ ಅವರನ್ನು ಮಂತ್ರಿಯನ್ನಾಗಿ ನೇಮಕ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇನ್ನು ಪಕ್ಷಾಂತರ ಮಾಡಿರುವ ಮೂರು ಜನರ ಪೈಕಿ ನೂತನ ಶಾಸಕರಾದ ರಮೇಶ್ ಜಾರಕಿಹೊಳಿ ಅವರು ಈ ಬಾರಿ ಸಂಪುಟಕ್ಕೆ ಸೇರುವುದು ಬಹುತೇಕ ಖಚಿತವಾಗಿದೆ. ಅಲ್ಲದೇ, ಶಾಸಕ ಮಹೇಶ್ ಕುಮಟಳ್ಳಿ ಮತ್ತು ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಸದ್ಯಕ್ಕೆ ನಿಗಮ ಮಂಡಳಿ ಅಧ್ಯಕ್ಷಗಿರಿ ಜತೆ ಸಂಪುಟ ದರ್ಜೆ ಸ್ಥಾನ ಮಾನ ನೀಡುವ ಆಲೋಚನೆ ಸಿಎಂ ಅವರದು ಎನ್ನಲಾಗುತ್ತಿದೆ. ಇದರ ಜೊತೆಗೆ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗಿ ಮುಂದುವರಿಯೋದು ಪಕ್ಕಾ ಆಗಿದೆ. ಆದರೆ ಈ ಲೆಕ್ಕಾಚಾರಕ್ಕೆ ಸ್ಪಷ್ಟವಾದ ಮಾಹಿತಿ ಸಂಕ್ರಾಂತಿಯ ನಂತರ ಉತ್ತರ ದೊರೆಯಲಿದೆ.
ಹಾವೇರಿ, ಸಿಎಂ ಪಾಲಿಗೆ ಮತ್ತೊಂದು ತಲೆನೋವು ಆಗಿದ್ದು, ಬಿ.ಸಿ ಪಾಟೀಲ್ ಮತ್ತು ಆರ್. ಶಂಕರ್ ರಾಜೀನಾಮೆಯಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಅವರಿಬ್ಬರಿಗೂ ಮಂತ್ರಿ ಸ್ಥಾನ ನೀಡಲೇಬೇಕು. ಇನ್ನು ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಪಾಲಿಗೆ ಪರಮಾಪ್ತರು. ಅವರನ್ನು ಸಂಪುಟದಿಂದ ಕೈ ಬಿಡೋದಕ್ಕೂ ಬಿಎಸ್ವೈಗೆ ಮನಸ್ಸಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಎಂ ಇದ್ದಾರೆ. ಸದ್ಯಕ್ಕೆ ಬಿ.ಸಿ.ಪಾಟೀಲ್ ಅವರಿಗೆ ಮಂತ್ರಿ ಸ್ಥಾನ ನೀಡಿ ಜೂನ್ವರೆಗೆ ಕಾಯುವಂತೆ ಆರ್.ಶಂಕರ್ ಅವರನ್ನು ಮನವೊಲಿಸಬಹುದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಾನಸಭೆ ಸದಸ್ಯರು ಮಂತ್ರಿಯಾಗಿಲ್ಲ. ಪರಿಷತ್ ಸದಸ್ಯರಾಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಮಾತ್ರ ಮಂತ್ರಿಯಾಗಿದ್ದಾರೆ. ಈಗ ಲಕ್ಷ್ಮಣ ಸವದಿ ಅವರಿಗಾಗಿ ಪೂಜಾರಿ ಅವರು ಮಂತ್ರಿ ಸ್ಥಾನ ತ್ಯಾಗ ಮಾಡಬಹುದು ಎಂದು ಹೇಳಲಾಗುತ್ತಿದೆ. ಹಾಗೆ ಆಗಿದ್ದೇ ಆದರೆ, ಕರಾವಳಿ ಭಾಗಕ್ಕೆ ಪ್ರಾತಿನಿಧ್ಯ ಕಲ್ಪಿಸಲು ಸುಳ್ಯ ಕ್ಷೇತ್ರದ ಅಂಗಾರಾ. ಎಸ್ ಅವರನ್ನು ಮಂತ್ರಿ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.
ಬೆಂಗಳೂರು ನಗರ ಜಿಲ್ಲೆಯ ಮೂವರು ಬಿಜೆಪಿ ಶಾಸಕರು ಈ ಬಾರಿ ಮಂತ್ರಿಯಾಗುವುದು ಖಚಿತವಾಗಿದ್ದು, ಈ ಬಗ್ಗೆ ಯಾರಿಗೂ ಅಸಮಾಧಾನ ಇಲ್ಲ.
ಯಡಿಯೂರಪ್ಪ ಕೊಟ್ಟ ಮಾತಿನಂತೆ ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ. ಗೋಪಾಲಯ್ಯ, ಯಶವಂತಪೂರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ. ಆದರೆ ಇವರು ದೊಡ್ಡ ದೊಡ್ಡ ಖಾತೆಗಳನ್ನೇ ಕೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಅಂತಿಮವಾಗಿ ಸಚಿವ ಸಂಪುಟದ ಖಾತೆ ಹಂಚಿಕೆಯ ನಿರ್ಧಾರವಾಗುವುದು ಹೈಕಮಾಂಡ್ ಮಟ್ಟದಲ್ಲಿ. ಹೀಗಾಗಿ ಪಾಲಿಗೆ ಬಂದಿದ್ದು ಪಂಚಾಮೃತ. ಯಡಿಯೂರಪ್ಪ ನೀಡುವ ಖಾತೆಗಳಿಗೆ ತೃಪ್ತಿಪಟ್ಟುಕೊಳ್ಳುವುದು ಈ ಶಾಸಕರಿಗೆ ಅನಿವಾರ್ಯ ಎಂದರೂ ತಪ್ಪಾಗಲಾರದು.