ಬೆಂಗಳೂರು,ಜ.2- ಕಲ್ಪತರು ನಾಡು ತುಮಕೂರಿನಲ್ಲಿ ನಡೆಯಲಿರುವ ಕೃಷಿ ಸಮ್ಮಾನ್ ಮೊದಲ ಹಂತದ ಯೋಜನೆ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಆತ್ಮೀಯವಾಗಿ ಬರಮಾಡಿಕೊಂಡರು.
ನವದೆಹಲಿಯಿಂದ ವಿಶೇಷ ವಿಮಾನದಲ್ಲಿ 1.20ಕ್ಕೆ ಯಲಹಂಕ ವಾಯುನೆಲೆ(ಏರ್ಬೇಸ್)ಗೆ ಆಗಮಿಸಿದ ಪ್ರಧಾನಿಯವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾರ ಹಾಕಿ, ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ ಸ್ವಾಗತಿಸಿದರು.
ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಮತ್ತಿತರರು ಸ್ವಾಗತಿಸಿದರು.
ಬಳಿಕ ಪ್ರಧಾನಿಯವರು ಅಲ್ಲಿಂದಲೇ ಭಾರತೀಯ ವಾಯುಪಡೆಗೆ (ಐಎಎಫ್)ಸೇರಿದ ವಿಶೇಷ ಹೆಲಿಕಾಪ್ಟರ್ನಲ್ಲಿ ತುಮಕೂರಿಗೆ ತೆರಳಿದರು. ಈ ವೇಳೆ ರಾಜ್ಯ ಪೋಲೀಸ್ ಮಹಾನಿರ್ದೇಶಕರಾದ ನೀಲಮಣಿ ಎಂ.ರಾಜು, ನಗರ ಪೋಲೀಸ್ ಆಯುಕ್ತ ಭಾಸ್ಕರ್ರಾವ್ ಮತ್ತಿತರರು ಪ್ರಧಾನಿಯವರನ್ನು ಬರಮಾಡಿಕೊಂಡರು.