ಬೆಂಗ್ಳೂರಿಗೆ ಪ್ರಧಾನಿ: ರೋಡ್‍ಗಳಿಗೆ ದಿಢೀರ್ ಬಣ್ಣ ಬಳಿದು ಹೂಕುಂಡ ನೆಟ್ಟ ಬಿಬಿಎಂಪಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಇಂದು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ರಸ್ತೆಗಳ ಶೃಂಗಾರ ಕೆಲಸ ಆರಂಭಗೊಂಡಿದೆ. ಮೋದಿ ಸಂಚಾರ ಮಾಡುವ ರಸ್ತೆಗಳ ಕಾಮಗಾರಿಗಳನ್ನು ತರಾತುರಿಯಲ್ಲಿ ಬಿಬಿಎಂಪಿ ಕೈಗೆತ್ತಿಕೊಂಡಿದೆ.

ನಗರದ ಡಿಆರ್ ಡಿಓ ಆವರಣ, ರಾಜಭವನ ಹಾಗೂ ಜಿಕೆವಿಕೆಯಲ್ಲಿ ಮೋದಿ ಅವರ ಕಾರ್ಯಕ್ರಮ ಆಯೋಜನೆಯಾಗಿದೆ. ಹೀಗಾಗಿ ಈ ರಸ್ತೆಗಳಿಗೆ ಸಂಪರ್ಕ ನೀಡುವ ಮಾರ್ಗಗಳನ್ನು ಬಿಬಿಎಂಪಿ ಚೆಂದಗೊಳಿಸುತ್ತಿದೆ.

ಎಚ್‍ಎಎಲ್, ಮುರುಗೇಶ್ ಪಾಳ್ಯ, ಮಣಿಪಾಲ್ ರಸ್ತೆ, ದೊಮ್ಮಲೂರು, ಟ್ರಿನಿಟಿ ಸರ್ಕಲ್, ಎಂಜಿ ರೋಡ್, ರಾಜಭವನ, ಡಿ ಆರ್ ಡಿಓ ಕಚೇರಿ ರಸ್ತೆಗಳಲ್ಲಿ ಕಾಮಗಾರಿ ನಡೆದಿದೆ. ಈ ಎಲ್ಲಾ ರಸ್ತೆಗಳಲ್ಲಿ ಡಿವೈಡರ್ ಪೇಂಟಿಂಗ್, ಟ್ರೀ ಟ್ರಿಮ್ಮಿಂಗ್, ಜೀಬ್ರಾ ಕ್ರಾಸ್ ಪೇಂಟಿಂಗ್, ಸ್ಟ್ರೀಟ್ ಲೈಟ್ ಸರಿಪಡಿಸುವುದು ಹಾಗೂ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಮಾಡಲಾಗುತ್ತಿದೆ.

ಬರೋಬ್ಬರಿ ರಸ್ತೆ ರಿಪೇರಿಗಾಗಿಯೇ ಒಂದೂವರೆ ಕೋಟಿ ರೂ.ಗಳನ್ನು ಬಿಬಿಎಂಪಿ ಖರ್ಚು ಮಾಡುತ್ತಿದೆ. ಉಳಿದಂತೆ ಇತರೆ ಕಾಮಗಾರಿ ಲೆಕ್ಕದಲ್ಲಿ ಒಂದೂವರೆ ಕೋಟಿ ರೂ. ಖರ್ಚಾಗುತ್ತಿದೆ. ಅದರಲ್ಲೂ ರಾಜಭವನ ರಸ್ತೆಯಲ್ಲಿ ಇಕ್ಕೆಲಗಳನ್ನು ಅಗೆಯಲಾಗಿದೆ. ಇವತ್ತಿವರೆಗೂ ಪಾಲಿಕೆ ಸೂಚನ ಫಲಕವೇ ಹಾಕುತ್ತಿರಲಿಲ್ಲ. ಆದರೆ ಈಗ ಹಳ್ಳ ಕಾಣದಂತೆ ಟರ್ಪಲ್ ಸಹ ಹಾಕಿ ಮುಚ್ಚಲಾಗಿದೆ.

ಇಂದು ಮಧ್ಯಾಹ್ನ ಸುಮಾರು 2.10ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್‍ಗೆ ಆಗಮಿಸಲಿರುವ ಪ್ರಧಾನಿ ಮೋದಿ, ಮೊದಲು ಸಿದ್ದಗಂಗಾ ಮಠಕ್ಕೆ ಭೇಟಿ ಕೊಡಲಿದ್ದಾರೆ.

ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮಾಡಿ ಪೂಜೆ ನೆರವೇರಿಸಲಿದ್ದಾರೆ. ಭೇಟಿ ಸ್ಮರಣಾರ್ಥ ಗದ್ದುಗೆ ಪಕ್ಕದಲ್ಲಿ ಬಿಲ್ವಪತ್ರೆ ಗಿಡ ನೆಡಲಿದ್ದಾರೆ.

ಶಿವಕುಮಾರ ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಠದ ವಿದ್ಯಾರ್ಥಿಗಳ ಜೊತೆ ಮಾತನಾಡಲಿದ್ದಾರೆ. ಆ ಬಳಿಕ ತುಮಕೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ