
ನವದೆಹಲಿ/ಬೆಂಗಳೂರು, ಡಿ.29- ಅತ್ಯಾಚಾರ ಮತ್ತು ಇತರ ಆರೋಪಗಳಿಗೆ ಗುರಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಬಂಧನ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ತೀವ್ರಗೊಳಿಸಿದೆ.
ನಿತ್ಯಾನಂದ ಬಂಧನಕ್ಕೆ ಹಸಿರು ನಿಶಾನೆ ತೋರಿರುವ ಕೇಂದ್ರ ಗೃಹ ಸಚಿವಾಲಯ ಈ ಸಂಬಂದ ರಾಜ್ಯಕ್ಕೆ ತುರ್ತು ಪತ್ರ ರವಾನಿಸಿದ್ದು, ಬಂಧನಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವಂತೆ ಮತ್ತು ಇದಕ್ಕೆ ಅಗತ್ಯವಾದ ದಾಖಲೆ ಪತ್ರಗಳು, ಪುರಾವೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.
ನಿತ್ಯಾನಂದ ಅವರಿಂದ ಲೈಂಗಿಕ ಕಿರುಕುಳ ಮತ್ತು ಇತರ ಹಿಂಸೆಗೆ ಗುರಿಯಾಗಿರುವ ಮಹಿಳೆಯರು ನೀಡಿರುವ ದೂರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ತಲುಪಿದೆ. ಅಲ್ಲದೆ, ತಮಿಳುನಾಡಿನಲ್ಲಿ ಸಂಗೀತಾ ಎಂಬ ಯುವತಿ ಸಾವಿನ ಹಿಂದೆಯೂ ನಿತ್ಯಾನಂದನ ಕೈವಾಡವಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿಯೂ ಕೇಂದ್ರ ಸರ್ಕಾರ ಸ್ವಘೋಷಿತ ದೇವಮಾನವನ ಬಂಧನ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ.
ಸಂಗೀತಾ ಅವರ ತಾಯಿ ಝಾನ್ಸಿ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿ ಪತ್ರ ಬರೆದಿದ್ದರು. ಈ ಎಲ್ಲ ಅಂಶಗಳನ್ನೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬಂಧನ ಪ್ರಕ್ರಿಯೆಗೆ ಅಗತ್ಯವಾಗುವ ಎಲ್ಲ ದಾಖಲೆ ಪತ್ರಗಳನ್ನೂ ಸಿದ್ಧಪಡಿಸಿ ರವಾನಿಸುವಂತೆ ರಾಜ್ಯದ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ.
ಬಿಡದಿಯಲ್ಲಿ ಆಶ್ರಮ ಹೊಂದಿದ್ದ ನಿತ್ಯಾನಂದ ವಿರುದ್ಧ ಬಹು ಹಿಂದಿನಿಂದಲೂ ಲೈಂಗಿಕ ಕಿರುಕುಳ ಮತ್ತಿತರ ಆರೋಪಗಳು ಕೇಳಿಬಂದಿದ್ದವು. ಹಠಾತ್ತನೆ ವಿದೇಶಕ್ಕೆ ಹಾರಿರುವ ಈತನ ವಿರುದ್ಧ ಕ್ರಮ ಕೈಗೊಂಡು ಬಂಧಿಸುವಂತೆ ಭಾರೀ ಒತ್ತಡಗಳು ಬಂದಿದ್ದವು.