ಕೊಲ್ಹಾಪುರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ- ಕನ್ನಡ ಸಂಘಟನೆಗಳ ತೀವ್ರ ಆಕ್ರೋಶ

ಕೊಲ್ಹಾಪುರ/ಬೆಳಗಾವಿ, ಡಿ.29-ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ನಿನ್ನೆ ಪುಂಡಾಟಿಕೆ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ ಬೆಳಗಾವಿ ಗಡಿ ಗ್ರಾಮಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಯಾವುದೇ ಅಹಿತಕರ ಘಟನೆಗಳು ಭುಗಿಲೇಳದಂತೆ ತಡೆಯಲು ಕಟ್ಟೆಚ್ಚರ ವಹಿಸಲಾಗಿದ್ದು, ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹಾಕಿ ಎಂಬ ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿಕೆ ಖಂಡಿಸಿ ಕೊಲ್ಹಾಪುರದಲ್ಲಿ ಎಂಇಎಸ್ ನಾಯಕರು ಪ್ರತಿಭಟನೆ ನಡೆಸಿದರು. ಭೀಮಾಶಂಕರ ಅವರ ಪ್ರತಿಕೃತಿಯ ಮೇಲೆ ಕನ್ನಡ ಧ್ವಜ ಇಟ್ಟು ಸುಟ್ಟು ಹಾಕಿದ್ದಾರೆ. ಈ ಘಟನೆಯಿಂದಾಗಿ ಮಹಾರಾಷ್ಟ್ರ-ಬೆಳಗಾವಿ ಗಡಿ ಗ್ರಾಮಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿದೆ.

ಠಾಕ್ರೆ ಪ್ರತಿಕೃತಿ ದಹಿಸಿ ಆಕ್ರೋಶ:
ಕೊಲ್ಹಾಪುರ ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರವಾಸಿ ಮಂದಿರದ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲಿಂದ ಅಶೋಕ ವೃತ್ತದವರೆಗೆ ಮೆರವಣಿಗೆ ನಡೆಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತ್ಯುತ್ತರ ನೀಡಿದರು.

ಠಾಕ್ರೆ ಪ್ರತಿಕೃತಿ ದಹನದ ನಂತರ ಶಿವಸೇನೆ ನಾಯಕರು ಆಕ್ರೋಶಗೊಂಡಿದ್ದು, ಗಡಿಯಲ್ಲಿನ ಗ್ರಾಮಗಳಲ್ಲಿ ಪ್ರತಿಭಟನೆ ಮತ್ತು ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ವ್ಯಾಪಕ ಪೋಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪ್ರತಿಭಟನೆ ಭುಗಿಲೇಳದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಈ ನಡುವೆ ಕೊಲ್ಹಾಪುರದಿಂದ ಬೆಳಗಾವಿಗೆ ಸಂಚರಿಸುವ ಮಹಾರಾಷ್ಟ್ರ ರಾಜ್ಯಸರ್ಕಾರದ ಬಸ್‍ಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಒಟ್ಟಾರೆ ಗಡಿ ಭಾಗದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನೆಲೆಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ