ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ದೇಹಾಂತ್ಯ- ತೀವ್ರ ಸಂತಾಪ ವ್ಯಕ್ತಪಡಿಸಿದ ಗಣ್ಯರು

ಬೆಂಗಳೂರು, ಡಿ.29- ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ದೇಹಾಂತ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಗಳು, ಸಚಿವರು, ಮಾಜಿ ಸಚಿವರು, ಸಂಸದರು, ಶಾಸಕರು ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀಗಳ ದೇಹಾಂತ್ಯದಿಂದ ಹಿಂದೂಧರ್ಮದ ಪ್ರಮುಖ ಮಾರ್ಗದರ್ಶಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ವಿಷಾದಿಸಿದ್ದಾರೆ.

ಹಿಂದೂ ಧರ್ಮದ ಉತ್ಥಾನಕ್ಕೆ ಶ್ರೀಗಳ ಕೊಡುಗೆ ಅವಿಸ್ಮರಣೀಯ ಎಂದಿರುವ ಮುಖ್ಯಮಂತ್ರಿಗಳು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ನೋಡುವ ಅವರ ಅಪೇಕ್ಷೆ ನೆರವೇರಲಿಲ್ಲ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಕೃಷ್ಣನಲ್ಲಿ ಐಕ್ಯರಾದರು ಎಂಬ ವಿಷಯ ತಿಳಿದು ತೀವ್ರ ಆಘಾತವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಮಾಜದ ಅಸಮಾನತೆಗಳ ವಿರುದ್ಧ ಧ್ವನಿಯಾಗಿದ್ದ ಶ್ರೀಗಳ ಚಿಂತನೆಗಳು ನಮ್ಮೆಲ್ಲರಿಗೂ ಮಾದರಿ. ಶ್ರೀಗಳ ಭಕ್ತವೃಂದಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಗೌಡರು ಪಾರ್ಥಿಸಿದ್ದಾರೆ.

ಪೇಜಾವರ ಮಠದ ಮುಖ್ಯಸ್ಥರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಅಗಲಿರುವುದಕ್ಕೆ ಸಂತಾಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿದ್ವಾಂಸರಾಗಿ, ಸಾಮಾಜಿಕ ಸೇವಕರಾಗಿ, ಧಾರ್ಮಿಕ ಹೋರಾಟದ ಮೂಲಕ ರಾಷ್ಟ್ರಮಾನ್ಯತೆ ಗಳಿಸಿದ್ದ ಶ್ರೀಗಳಿಗೆ ಭಗವಂತನು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ನಮ್ಮೆಲ್ಲರ ಪ್ರೀತಿ-ಗೌರವ, ಭಕ್ತಿಗೆ ಪಾತ್ರರಾಗಿ ಇಡೀ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಶ್ರೇಷ್ಠ, ದೈವಸ್ವರೂಪಿ ಯತಿವರೇಣ್ಯರಾಗಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಶ್ರೀಕೃಷ್ಣನಲ್ಲಿ ಐಕ್ಯವಾಗಿರುವ ಸುದ್ದಿ ಕೇಳಿ ತೀವ್ರ ದುಃಖ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.

ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಅಗಲಿಕೆಗೆ ತೀವ್ರ ಕಂಬನಿ ಮಿಡಿದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸದಾ ಜೀವನೋತ್ಸಾಹದ ಚಿಲುಮೆಯಂತಿದ್ದ ಶ್ರೀಗಳು ಸಮಾಜಮುಖಿ ನಿಲುವಿನ ಶ್ರೇಷ್ಠ ಸಂತರಾಗಿದ್ದರು. ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಶ್ರೀಗಳ ನಿಧನದಿಂದ ನಾಡು ಬಡವಾಗಿದೆ ಎಂದು ಶೋಕ ಸಂದೇಶದಲ್ಲಿ ವಿಷಾದಿಸಿದ್ದಾರೆ.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದಾ ಚಟುವಟಿಕೆಯಿಂದ ಶ್ರಮಿಸುತ್ತ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆಯಿಂದ ಈ ಎಲ್ಲ ಕ್ಷೇತ್ರಗಳು ಬಡವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುಃಖ ವ್ಯಕ್ತಪಡಿಸಿದ್ದಾರೆ.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ದೇಹಾಂತ್ಯದಿಂದ ದೇಶವು ಹಿಂದೂ ಧರ್ಮದ ಪ್ರಮುಖ ಮಾರ್ಗದರ್ಶಿಯೊಬ್ಬರನ್ನು ಕಳೆದುಕೊಂಡು ತುಂಬಲಾರದ ನಷ್ಟ ಉಂಟಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಷಾದಿಸಿದ್ದಾರೆ.

ನಮ್ಮೆಲ್ಲರ ಪ್ರೀತಿ ಗೌರವ ಭಕ್ತಿಗೆ ಪಾತ್ರರಾಗಿ ಇಡೀ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಶ್ರೇಷ್ಠ, ದೈವ ಸ್ವರೂಪಿ ಯತಿವರೇಣ್ಯರಾಗಿದ್ದ ಶ್ರೀ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರು ಶ್ರೀಕೃಷ್ಣನಲ್ಲಿ ಐಕ್ಯರಾಗಿರುವುದು ತುಂಬಾ ನೋವುಂಟಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಶ್ರೀಗಳ ಆದರ್ಶ-ಸಿದ್ಧಾಂತಗಳನ್ನು ನಾವೆಲ್ಲರೂ ನಿಷ್ಠೆಯಿಂದ ಆಚರಿಸುವುದೇ ನಾವೆಲ್ಲ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ನಾನು ಭಾವಿಸುತ್ತೇನೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಜೀವಂತ ದೇವರು ಹಾಗೂ ನನ್ನ ಗುರುಗಳೂ ಆಗಿದ್ದ ದೇಶ ಕಂಡ ಅಪ್ರತಿಮ ಹಿಂದೂ ಪ್ರತಿಪಾದಕರಾಗಿದ್ದ ಉಡುಪಿ ಪೇಜಾವರ ಶ್ರೀಗಳು ಇಂದು ನಮ್ಮನ್ನೆಲ್ಲ ಅಗಲಿದ್ದು ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಂಬನಿ ಮಿಡಿದಿದ್ದಾರೆ.

ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಶ್ರೀಕೃಷ್ಣನಲ್ಲಿ ಲೀನವಾಗಿರುವುದು ಭಕ್ತವೃಂದ ಹಾಗೂ ಇಡೀ ದೇಶಕ್ಕೇ ತುಂಬಲಾರದ ನಷ್ಟವಾಗಿದೆ ಎಂದು ಸಚಿವ ಆರ್.ಅಶೋಕ್ ಶೋಕ ವ್ಯಕ್ತಪಡಿಸಿದ್ದಾರೆ.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಹರಿಯಲ್ಲಿ ಲೀನರಾದ ಸುದ್ದಿ ತಿಳಿದು ಆಘಾತ ಉಂಟಾಯಿತು ಎಂದಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶ್ರೀಗಳ ಅಗಲಿಕೆಯಿಂದ ರಾಜ್ಯ ಹಾಗೂ ದೇಶ ಅಕ್ಷರಶಃ ಬಡವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ಯಾಕುಮಾರಿಯಿಂದ ಕಾಶಿವರೆಗೆ ಅನೇಕ ವಿದ್ವತ್ ಜನರನ್ನು ತರ್ಕಶಾಸ್ತ್ರದಲ್ಲಿ ಮಣಿಸಿ ಪ್ರಖಾಂಡ ಪಂಡಿತರೆನಿಸಿದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಅಗಲಿಕೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.

ಪೇಜಾವರ ಶ್ರೀಗಳ ಅಗಲಿಕೆಯಿಂದ ವಿಶ್ವದ ಆಧ್ಯಾತ್ಮಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಂತಾಪ ಸೂಚಿಸಿದ್ದಾರೆ.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಅಗಲಿಕೆಯಿಂದ ಕರ್ನಾಟಕ ಮಾತ್ರವಲ್ಲ, ಇಡೀ ಭಾರತ ದೇಶವೇ ಬಡವಾಗಿದೆ ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಬಿ.ಖಂಡ್ರೆ ಅವರು ನಾಡಿಗೆ ಅಮೋಘವಾದ ಸೇವೆ ಸಲ್ಲಿಸಿದ್ದರು ಎಂದು ಸಂತಾಪ ಸೂಚನೆಯಲ್ಲಿ ಸ್ಮರಿಸಿದ್ದಾರೆ.

ಸಂಸದ ಬಿ.ಎನ್.ಬಚ್ಚೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್‍ಬಾಬು ಸೇರಿದಂತೆ ಹಲವು ಗಣ್ಯರು ಶ್ರೀಗಳ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ