ನವದೆಹಲಿ,ಡಿ.26- ಪಂಜಾಬ್‍ನಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಖಲೀಸ್ತಾನ್ ದೊಡ್ಡಮಟ್ಟದ ಕುತಂತ್ರವೊಂದನ್ನು ರೂಪಿಸಿದ್ದು, ಪಾಕಿಸ್ತಾನದ ನೆರವೊಂದಿಗೆ ಭಾರೀ ದಾಳಿ ನಡೆಸಲು ಸನ್ನದ್ದರಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭಿಸಿದೆ.
ಪಾಕಿಸ್ತಾನದಲ್ಲಿ ಖಲೀಸ್ತಾನ್ ಭಯೋತ್ಪಾದಕರು ರಹಸ್ಯ ಸಭೆ ನಡೆಸಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ವಿವಿಧೆಡೆ ಭಾರೀ ದಾಳಿಗಳನ್ನು ನಡೆಸಲು ಯೋಜನೆ ರೂಪಿಸಿದ್ದಾರೆ ಎಂಬ ಬಗ್ಗೆ ಗುಪ್ತದಳಗಳು ಎಚ್ಚರಿಕೆ ನೀಡಿವೆ.
ಬಬ್ಬರ್ ಖಾಲ್ಸಾ ಮತ್ತು ಖಲೀಸ್ತಾನ್ ಜಿಂದಾಬಾದ್ ಪೋರ್ಸ್ ಕೆ.ಎಸ್.ಜೆಡ್.ಪಿ ಸಂಘಟನೆಗಳ ಉಗ್ರರು ಪಾಕಿಸ್ತಾನದಲ್ಲಿ ಗೌಪ್ಯ ಸಭೆ ನಡೆಸಿದ್ದಾರೆ.
ಪಂಜಾಬ್‍ಗೆ ರಹಸ್ಯವಾಗಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡಲು ಮತ್ತು ಅಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ತಮಗೆ ಬೆಂಬಲ ಮತ್ತು ಸಹಕಾರ ನೀಡುವಂತೆ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಭಾರತದ ವಿರುದ್ದ ದಾಳಿ ನಡೆಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುವ ಪಾಕಿಸ್ತಾನ ಉಗ್ರರು ಮತ್ತು ಪಾಕ್ ಸೇನೆ ಕೂಡ ಈ ಕುತಂತ್ರಕ್ಕೆ ಬೆಂಬಲ ನೀಡಿದೆ ಎಂದು ಗುಪ್ತಚರ ಮೂಲಗಳು ತಿಳಿದುಬಂದಿದೆ.
ಪಂಜಾಬ್ ಗಡಿ ಭಾಗಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಜವಾಬ್ದಾರಿ ನಿರ್ವಹಿಸಿದರೆ ಅಲ್ಲಿ ಭಾರೀ ದಾಳಿ ನಡೆಸುವ ಹೊಣೆಯನ್ನು ತಾನು ಹೊತ್ತುಕೊಳ್ಳುವುದಾಗಿ ಖಲೀಸ್ತಾನ್ ಉಗ್ರರು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ವಾಗ್ದಾನ ಮಾಡಿವೆ ಎಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವಾಲಯ ಗಡಿಭದ್ರತಾ ಪಡೆ, ರಾಷ್ಟ್ರೀಯ ತನಿಖಾ ಸಂಸ್ಥೆ ಸೇರಿದಂತೆ ವಿವಿಧ ಭದ್ರತಾ ಪಡೆಗಳಿಗೆ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಮತ್ತು ಶಂಕಾಸ್ಪದ ಚಲನವಲನಗಳ ಬಗ್ಗೆ ನಿಗಾವಹಿಸುವಂತೆ ಸೂಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ರಾಜಸ್ಥಾನ ಗಡಿಭಾಗಗಳಲ್ಲಿ ಯೋಧರು ಹದ್ದಿನಕಣ್ಣಿನ ನಿಗಾ ಇಟ್ಟಿದ್ದಾರೆ.