ಕ್ರಿಸ್ಮಸ್ ದಿನದಂದೇ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತ-18 ಮಂದಿ ಸಾವು

ಮನಿಲಾ, ಡಿ.26-ದಕ್ಷಿಣ ಫಿಲಿಪೈನ್ಸ್‍ನ ಪ್ರಸಿದ್ಧ ಪ್ರವಾಸಿ ತಾಣ ಮತ್ತು ಸಮುದ್ರ ತೀರದ ಗ್ರಾಮಗಳ ಮೇಲೆ ಕ್ರಿಸ್ಮಸ್ ದಿನದಂದೇ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತದಲ್ಲಿ 18 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.

ಈ ಪ್ರಕೃತಿ ವಿಕೋಪದಲ್ಲಿ ಕೆಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಫಾನ್‍ಪೋನ್ ಹೆಸರಿನ ಸಮುದ್ರ ಸುಂಟರಗಾಳಿ ಬೊರಾಕೆ, ಕರೋನ್ ಮತ್ತು ಇತರ ಪ್ರಸಿದ್ಧ ಪ್ರವಾಸಿ ತಾಣಗಳ ಹಾಗೂ ವಿಸಾಯಸ್ ಪ್ರದೇಶದ ಪಟ್ಟಣಗಳು ಮತ್ತು ಗ್ರಾಮಗಳ ಮೇಲೆ ಅಪ್ಪಳಿಸಿತು. ಗಂಟೆಗೆ 195 ಕಿ.ಮೀ. ವೇಗದಲ್ಲಿ ಬಂದೆರಗಿದ ಚಂಡಮಾರುತದ ರೌದ್ರಾವತಾರದಿಂದ ಕನಿಷ್ಠ 18 ಮಂದಿ ಮೃತಪಟ್ಟು, ಅನೇಕರಿಗೆ ಗಾಯಗಳಾಗಿವೆ. ಅನೇಕ ಮನೆಗಳ ಮತ್ತು ರೆಸಾರ್ಟ್‍ಗಳ ಮೇಲ್ಛಾವಣಿಗಳು ಹಾರಿ ಹೋಗಿದ್ದು, ನೂರಾರು ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿವೆ. ಇದರಿಂದ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಸಂಚಾರ ವ್ಯವಸ್ಥೆ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ. ಇಂಟರ್‍ನೆಟ್ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೈಪೋನ್ ಫಾನ್‍ಪೋನ್‍ನಿಂದ ಈ ಪ್ರದೇಶಗಳಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಈ ಭೀಕರ ಪ್ರಕೃತಿ ವಿಕೋಪದಲ್ಲಿ ಕೆಲವರು ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.

ಚಂಡಮಾರುತದಿಂದ ಅಪಾಯದಲ್ಲಿ ಸಿಲುಕಿದ್ದ ವಿವಿಧ ದೇಶಗಳ ಪ್ರವಾಸಿಗರನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ