ಆರ್ಥಿಕ ಪ್ರಗತಿಗೆ ಭಾರತದ ಕೊಡುಗೆ ಅತ್ಯಂತ ಮುಖ್ಯ- ಐಎಂಎಫ್

ವಾಷಿಂಗ್ಟನ್, ಡಿ.24-ಜಾಗತಿಕ, ಆರ್ಥಿಕ ಪ್ರಗತಿಗೆ ಭಾರತದ ಕೊಡುಗೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಸ್ತುತ ಆರ್ಥಿಕ ಹಿನ್ನಡೆಯಿಂದ ಹೊರಬರಲು ಭಾರತವು ಅತ್ಯಂತ ತ್ವರಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ಮಾಡಿದೆ.

ಬಂಡವಾಳ ಹೂಡಿಕೆಯಲ್ಲಿ ಇಳಿಕೆ ಮತ್ತು ತೆರಿಗೆ ಸಂಗ್ರಹದಲ್ಲಿ ಕುಸಿತ ಸೇರಿದಂತೆ ಮೊದಲಾದ ಕಾರಣಗಳಿಂದ ಭಾರತದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ. ಈ ಸ್ಥಿತಿಯಿಂದ ಭಾರತ ತಕ್ಷಣ ಹೊರಬರುವ ಅಗತ್ಯವಿದೆ. ಇದಕ್ಕಾಗಿ ತ್ವರಿತ ನೀತಿಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಐಎಂಎಫ್ ಹೇಳಿದೆ.

ವಾಷಿಂಗ್ಟನ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಐಎಂಎಫ್ ಏಷ್ಯಾ ಮತ್ತು ಫೆಸಿಫಿಕ್ ಪ್ರಾಂತ್ಯದ ಮುಖ್ಯಸ್ಥರಾದ ರಾನಿಲ್ ಸಲ್‍ಗ್ಯಾಡೋ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತುವ ಉತ್ತಮ ಕಾರ್ಯವನ್ನು ಕೈಗೊಂಡಿದೆ. ಇಂತಹ ಜನಪರ ಕಾರ್ಯಕ್ರಮಗಳ ಹಿನ್ನೆಲೆಯೂ ಕೂಡ ಭಾರತದ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಮತ್ತಷ್ಟು ಸುಧಾರಣಾ ಹಾಗೂ ಪರಿಣಾಮಕಾರಿ ನೀತಿಗಳ ಮೂಲಕ ಆರ್ಥಿಕ ಪುನಶ್ಚೇತನಕ್ಕೆ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಬೇಕು. ಆ ಮೂಲಕ ಜಾಗತಿಕ ಆರ್ಥಿಕ ಬೆಳವಣಿಗೆಗೂ ನೆರವಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಐಎಂಎಫ್ ಆರ್ಥಿಕ ವಿಭಾಗದ ಮುಖ್ಯಸ್ಥೆ ಗೀತಾ ಗೋಪಿನಾಥ್ ಅವರು ಕೂಡ ಆರ್ಥಿಕ ಹಿನ್ನಡೆಯಿಂದ ಹೊರಬರಲು ಕೇಂದ್ರ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ