ಪ್ರತಿಭಟನೆಗಳು ಸ್ವಪ್ರೇರಣೆಯಿಂದ ನಡೆಯುತ್ತಿವೆ- ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.24-ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಾಗರಿಕರು ಸ್ವಪ್ರೇರಣೆಯಿಂದ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳೂರು ಗಲಭೆ ಪ್ರಕರಣಕ್ಕೆ ಕಾಂಗ್ರೆಸ್‍ನ್ನು ಹೊಣೆ ಮಾಡಿ ಜನರ ಭಾವನೆಗಳನ್ನು ಕೆರಳಿಸಬೇಡಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಮನೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಗೋಲಿಬಾರ್ ಘಟನೆಗೆ ಸಂಬಂಧಪಟ್ಟಂತೆ ಕೆಲವು ವಿಡಿಯೋ ಹಾಗೂ ಪೋಟೋಗಳನ್ನು ಬಿಡುಗಡೆ ಮಾಡಿ ಕಾಂಗ್ರೆಸ್‍ನ್ನು ಹೊಣೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ. ಕಾಂಗ್ರೆಸ್ ತಲೆಗಾದರೂ ಕಟ್ಟಿ, ನನ್ನ ತಲೆಗಾದರೂ ಕಟ್ಟಿ ಚಿಂತೆ ಇಲ್ಲ. ಪ್ರತಿಭಟನೆಗಳು ಸ್ವಪ್ರೇರಣೆಯಿಂದ ನಡೆಯುತ್ತಿವೆ. ದೇಶದ ಯುವಕರು, ನಾಗರಿಕರು, ವಿದ್ಯಾರ್ಥಿಗಳು, ಚಿಂತಕರು ಸ್ವಪ್ರೇರಣೆಯಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಭಾವನೆಗಳನ್ನು ಕೆರಳಿಸಬೇಡಿ. ರಾಜಕೀಯ ಬಣ್ಣ ಹಚ್ಚಬೇಡಿ ಎಂದು ತಾಕೀತು ಮಾಡಿದರು.

ಪಂಕ್ಚರ್ ಹಾಕುವವರು, ಕಸ ಗುಡಿಸುವವರು ಸಮಾಜದ ಅವಿಭಾಜ್ಯ ಅಂಗ. ಎಲ್ಲರಿಗೂ ವಿದ್ಯಾಭ್ಯಾಸ ಪಡೆಯಲು ಆಗುವುದಿಲ್ಲ. ನಾನು ಕೂಡ ವಿದ್ಯಾವಂತನಲ್ಲ. ಒಂದು ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಪಮಾನ ಮಾಡುವುದು ಸರಿಯಲ್ಲ. ಈ ಹಿಂದೆ ಗುಜರಾತ್‍ನಲ್ಲಿ ಹೊಟ್ಟೆ ಸೀಳಿದ್ದರು, ಈಗ ಎದೆ ಸೀಳಿ ಅಕ್ಷರ ನೋಡುವ ಮಾತುಗಳನ್ನಾಡುತ್ತಿದ್ದಾರೆ. ಇದೇನಾ ಹೇಳಿಕೊಟ್ಟ ಸಂಸ್ಕøತಿ. ಎದೆ ಸೀಳಲು ಮುಂದಾಗಿದ್ದೀರಾ ಎಂದು ಪ್ರಶ್ನಿಸಿದರು.

ಪ್ರತಿಭಟನೆ ನಡೆಸುತ್ತಿರುವವರನ್ನು ಬುದ್ಧಿವಂತ ನಕ್ಸಲರು, ನಗರದ ನಕ್ಸಲರು ಎಂದು ಟೀಕಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಾಗರಿಕರನ್ನು ಅವಮಾನಿಸಿ ದೇಶದ್ರೋಹದ ಕೆಲಸ ಮಾಡಿದ್ದಾರೆ. ಕೂಡಲೇ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಡಿಕೆಶಿ ಒತ್ತಾಯಿಸಿದರು.

ಪೌರತ್ವ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತೊಡಗಿರುವವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಸಂವಿಧಾನ ಉಳಿಸಬೇಕು ಎಂಬ ಕಾರಣಕ್ಕಾಗಿ ಯುವಕರು, ವಿದ್ಯಾರ್ಥಿಗಳು, ಬುದ್ಧಿಜೀವಿಗಳು ತಾವಾಗಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ.

ಒಂದು ಕಾಲದಲ್ಲಿ ಅವರ ಬೆಂಬಲದಿಂದಾಗಿಯೇ ನೀವು ಭಾರೀ ಸಂಖ್ಯೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದೀರ ಎಂದು ಅದೇ ಜನರನ್ನು ನಗರದ ನಕ್ಸಲರು ಎಂದು ಕರೆದು ಅಪಮಾನ ಮಾಡುತ್ತಿದ್ದಾರೆ. ಸ್ವಾಭಿಮಾನದ ಬದುಕಿಗೆ ಕಂಟಕ ತರಲಾಗುತ್ತಿದೆ ಎಂಬ ಆತಂಕದಲ್ಲಿ ಬೀದಿಗಿಳಿದಿದ್ದಾರೆ. ಅವರ ಬದುಕಿನ ಜೊತೆ ಚೆಲ್ಲಾಟ ವಾಡಬೇಡಿ. ಎಲ್ಲರಿಗೂ ಸಂಸತ್‍ನಲ್ಲಿ ನಿಮ್ಮನ್ನು ಪ್ರಶ್ನಿಸುವ ಶಕ್ತಿ ಇಲ್ಲ. ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಧ್ವನಿಗೆ ಅವಕಾಶವಿದೆ. ಅದನ್ನು ಅಡಗಿಸುವ ಪ್ರಯತ್ನ ಮಾಡಬಾರದು ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದುತ್ತಿದೆ. ವಿಶ್ವದಲ್ಲಿ ಜನ ನಮ್ಮನ್ನು ಉಗಿಯುತ್ತಿದ್ದಾರೆ. ಭಾರತದಲ್ಲಿ ಯಾರೂ ಕೂಡ ಬಂಡವಾಳ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸಲು ಮುಂದೆ ಬರುತ್ತಿಲ್ಲ.

ಎನ್‍ಎಡಿ ಮೈತ್ರಿಕೂಟಕ್ಕೆ ಬೆಂಬಲ ನೀಡಿದ ತಮಿಳುನಾಡಿನ ಅಣ್ಣಾ ಡಿಎಂಕೆ, ಬಿಹಾರದ ನಿತೀಶ್‍ಕುಮಾರ್ ಅವರ ಸಂಯುಕ್ತ ಜನತಾದಳ, ರಾಮವಿಲಾಸ್ ಪಾಸ್ವಾನ್ ಅವರ ಲೋಕಜನಶಕ್ತಿ, ಬಿಜು ಜನತಾದಳ, ಆಂಧ್ರಪ್ರದೇಶದ ಜಗನ್‍ಮೋಹನ್‍ರೆಡ್ಡಿಯ ವೈಎಸ್‍ಆರ್ ಕಾಂಗ್ರೆಸ್ ಸೇರಿದಂತೆ ಹಲವಾರು ಮಿತ್ರ ಪಕ್ಷಗಳೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರಿಯಿಲ್ಲ. ಅದನ್ನು ಜಾರಿ ಮಾಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸುತ್ತಿವೆ.ಮೊದಲು ನಿಮ್ಮ ಮಿತ್ರರ ಮನವೊಲಿಕೆ ಮಾಡಿ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಮಂಗಳೂರು ಘಟನೆಗೆ ರಾಜ್ಯಸರ್ಕಾರವೇ ನೇರ ಹೊಣೆ. ಸರ್ಕಾರದ ಆದೇಶ ಇಲ್ಲದೆ ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲು ಸಾಧ್ಯವಿಲ್ಲ. ಮಂಗಳೂರಿನಲ್ಲಿ ಇನ್ಸ್‍ಪೆಕ್ಟರ್‍ವೊಬ್ಬರು ಗುಂಡೇಟಿನಿಂದ ಇನ್ನೂ ಯಾರೂ ಸತ್ತಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಮಂಗಳೂರು ಗಲಭೆಗೆ ನಾನು ಅಧಿಕಾರಿಗಳನ್ನು ಹೊಣೆ ಮಾಡಲು ಇಚ್ಛಿಸುವುದಿಲ್ಲ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ನೇರ ಹೊಣೆಗಾರರು ಎಂದು ಹೇಳಿದರು.

ದೇಶದಲ್ಲಿ ಆರ್ಥಿಕ ಕುಸಿತದಿಂದ ಕಂಗೆಟ್ಟಿರುವಾಗ ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ವಿಷಯಗಳಿಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ ನೋಟು ಅಮಾನೀಕರಣದಿಂದ ದೇಶ ಜರ್ಝರಿತವಾಗಿದೆ. ಮತ್ತೊಮ್ಮೆ 2000 ರೂ. ನೋಟು ಅಮಾನ್ಯ ಮಾಡುವ ಚರ್ಚೆ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಧೋರಣೆಗಳಿಗೆ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜನ ಉತ್ತರಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ