ಬೆಂಗಳೂರು, ಡಿ.18-ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಸಲು ರಾಜ್ಯ ನಾಯಕರು ಮುಂದಿನ ವಾರ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ನ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆ ಇದೆ.
ದಿನೇಶ್ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಅದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಂಗೀಕರಿಸಲು ಹೈಕಮಾಂಡ್ ನಿರಾಕರಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಭಾವಿ, ಯುವ ಉತ್ಸಾಹಿ ಮತ್ತು ವರ್ಚಸ್ವಿ ನಾಯಕರನ್ನು ನೇಮಿಸಬೇಕು ಎಂಬ ಆಗ್ರಹ ಬಲವಾಗಿ ಕೇಳಿ ಬಂದಿದ್ದು, ಈಗಾಗಲೇ ರೇಸ್ನಲ್ಲಿರುವ ಹಲವಾರು ಮಂದಿ ಹೆಸರುಗಳನ್ನು ಹೈಕಮಾಂಡ್ ಪರಿಶೀಲಿಸುತ್ತಿದೆ. ಸಿದ್ದರಾಮಯ್ಯ ಮನವೊಲಿಕೆಗೆ ನಿರಂತರ ಪ್ರಯತ್ನ ನಡೆಸಿರುವ ಹೈಕಮಾಂಡ್ ಆರೋಗ್ಯ ಸುಧಾರಿಸಿದ ಬಳಿಕ ಮುಂದಿನ ವಾರ ದೆಹಲಿಗೆ ಆಗಮಿಸುವಂತೆ ಸಲಹೆ ನೀಡಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಮುಂದಿನ ವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ.
ಕೆಪಿಸಿಸಿ ಅಧ್ಯಕ್ಷರಾಗಲು ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಕೃಷ್ಣಭೆರೇಗೌಡ, ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವಾರು ಮಂದಿ ರೇಸ್ನಲ್ಲಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಅವರುಗಳ ಹೆಸರುಗಳನ್ನು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ.
ಒಂದು ವೇಳೆ ದಿನೇಶ್ಗುಂಡೂರಾವ್ ಅವರೇ ರಾಜೀನಾಮೆ ಹಿಂಪಡೆದು ಮುಂದುವರೆಯುವುದಾಗಿ ಹೇಳಿದರೆ ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿ ಮುಂದುವರೆಯಲಿದೆ. ಇಲ್ಲವಾದರೆ ಸಂಕ್ರಾಂತಿ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆಯುವ ಸಾಧ್ಯತೆ ಇದೆ.
ಈಗಾಗಲೇ ಹಲವಾರು ಕಾನೂನು ತೊಡಕುಗಳಿಂದ ಸಮಸ್ಯೆಯಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಸದ್ಯಕ್ಕೆ ತಮಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಬೇಡ. ಎಲ್ಲಾ ತೊಡಕುಗಳಿಂದ ಬಿಡುಗಡೆಯಾಗಿ ಹೊರಬಂದ ಬಳಿಕ ನಾನೇ ಅವಕಾಶ ಕೇಳುತ್ತೇನೆ ಎಂದು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದಾರೆ.
ಹೀಗಾಗಿ ಕಾಂಗ್ರೆಸ್ ವರಿಷ್ಠರು ಎಂ.ಬಿ.ಪಾಟೀಲ್ ಅವರ ಹೆಸರನ್ನು ಪರಿಗಣಿಸಲು ಮುಂದಾಗಿದ್ದಾರೆ.
ಕಾಂಗ್ರೆಸ್ ಪಾಳಯದಲ್ಲಿ ಚುನಾವಣೆಗೆ ಸಂಪನ್ಮೂಲ ಕ್ರೋಢೀಕರಿಸುವ ವಿಷಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಅವರ ಹೆಸರು ಪ್ರಮುಖವಾಗಿವೆ. ಉಳಿದಂತೆ ಹಿರಿತನ, ಪಕ್ಷ ನಿಷ್ಠೆ ಸೇರಿದಂತೆ ಹಲವು ನಾಯಕರು ರೇಸ್ನಲ್ಲಿದ್ದರೂ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಚುನಾವಣೆಗೆ ಸಂಪನ್ಮೂಲ ಕ್ರೋಢೀಕರಣ ಮಾಡುವುದು ಅತ್ಯಂತ ಮಹತ್ವದ ಜವಾಬ್ದಾರಿಯಾಗಿದೆ.
ಮುಂದಿನ ಬಾರಿ ಅಧ್ಯಕ್ಷರಾಗುವವರು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲೇಬೇಕಿದೆ. ಹೀಗಾಗಿ ಮೂಲ ಕಾಂಗ್ರೆಸ್ ಎಂದು ಹೇಳಿಕೊಳ್ಳುವವರಿಗಿಂತಲೂ ರಾಜ್ಯಾದ್ಯಂತ ಪ್ರಭಾವಿಯಾಗಿರುವ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡುವ ನಾಯಕರಿಗೆ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರು ಎಂ.ಬಿ.ಪಾಟೀಲ್ ಅವರ ಹೆಸರಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಲಿಂಗಾಯತ ಸಮುದಾಯ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿದಂತಾಗಿದೆ ಎಂಬ ನಿಟ್ಟಿನಲ್ಲಿ ಹಲವಾರು ನಾಯಕರು ಕೂಡ ಎಂ.ಬಿ.ಪಾಟೀಲ್ ಅವರಿಗೆ ಸಹಮತ ವ್ಯಕ್ತಪಡಿಸುವ ಸಾಧ್ಯತೆ ಇದೆ. ಆದರೆ ದಿನೇಶ್ಗುಂಡೂರಾವ್ ಅವರ ಅಂತಿಮ ನಿರ್ಧಾರದ ಮೇಲೆ ಮುಂದಿನ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ ನಿರ್ಧಾರಿತವಾಗಲಿದೆ.