ಡಾ.ವಿಷ್ಣುವರ್ಧನ್ರವರ ಸ್ಮಾರಕ ನಿರ್ಮಾಣಕ್ಕೆ ಕೊನೆಗೂ ಮುಹೂರ್ತ ನಿಗದಿ

ಬೆಂಗಳೂರು,ಡಿ.18- ಒಂದಿಲ್ಲೊಂದು ಕಾರಣಗಳಿಂದ ಮುಂದೂಡುತ್ತಲೇ ಬಂದಿದ್ದ ಕನ್ನಡ ಚಿತ್ರರಂಗದ ಮೇರುನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.

ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ 3-4 ದಿನಗಳಲ್ಲಿ ರಾಜ್ಯ ಸರ್ಕಾರ ಶಂಕುಸ್ಥಾಪನೆ ನೆರವೇರಿಸಲಿದೆ.

ಈ ಸಂಬಂಧ ಬೆಂಗಳೂರಿನಲ್ಲಿ ಇಂದು ಚಿತ್ರನಟಿ ಭಾರತಿ ವಿಷ್ಣುವರ್ಧನ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಭಿಮಾನಿಗಳ ಒತ್ತಾಸೆಯಂತೆ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಅಡಿಗಲ್ಲು ಹಾಕಬೇಕೆಂದು ಮನವಿ ಮಾಡಿದ್ದಾರೆ.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಯಡಿಯೂರಪ್ಪ ಸ್ಮಾರಕ ನಿರ್ಮಾಣ ಸಂಬಂಧ ಎದುರಾಗಿರುವ ಕಾನೂನು ತೊಡಕುಗಳು, ಜಮೀನು ಹಸ್ತಾಂತರ, ಹಣಕಾಸಿನ ನೆರವು ಸೇರಿದಂತೆ ಸ್ಮಾರಕಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಹೀಗಾಗಿ ನೆನೆಗುದಿಗೆ ಬಿದ್ದಿದ್ದ ಸಾಹಸಿಂಹನ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗುತ್ತದೆ.
ಜೊತೆಗೆ ಸ್ಮಾರಕ ನಿರ್ಮಾಣಕ್ಕೆ ಅಗತ್ಯವಾದ ಭೂಮಿ, ಆರ್ಥಿಕ ನೆರವು ಸೇರಿದಂತೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಭಾರತಿ ವಿಷ್ಣುವರ್ಧನ್ ಅವರಿಗೆ ಬಿಎಸ್‍ವೈ ವಾಗ್ದಾನ ಮಾಡಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಅಭಿಮಾನಿಗಳ ಬಹುದಿನಗಳ ಬೇಡಿಕೆಯಂತೆ ಸ್ಮಾರಕ ನಿರ್ಮಿಸಲು ಸರ್ಕಾರ ಸಮ್ಮತಿಸಿದೆ. ಮೂರ್ನಾಲ್ಕು ದಿನಗಳ ನಂತರ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದು, ಸ್ಮಾರಕ ನಿರ್ಮಾಣಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದರು.

ಸ್ಮಾರಕ್ಕೆ ಯಾವ ಕಾರಣಕ್ಕೆ ವಿಳಂಬವಾಗಿತ್ತು ಎಂಬುದು ಅನಗತ್ಯ ವಿಷಯ. ಈಗ ಸರ್ಕಾರ ವಿಷ್ಣು ಸ್ಮಾರಕ ನಿರ್ಮಿಸಲು ಮುಂದಾಗಿರುವುದು ಎಲ್ಲರಿಗೂ ಸಂತಸ ತಂದಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ