ನಾವಿನ್ನು ಬದುಕಿದ್ದೇವೆ, ಸತ್ತಿಲ್ಲ- ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.18-ನಾವಿನ್ನು ಬದುಕಿದ್ದೇವೆ, ಸತ್ತಿಲ್ಲ, ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇಂದಿರಾಗಾಂಧಿ ಎಂಬುದು ದೇಶದ ಜನರ ಭಾವನಾತ್ಮಕ ವಿಷಯ. ಅದನ್ನು ಮುಟ್ಟಲು ಹೋಗಬೇಡಿ. ಯಾವುದೇ ಕಾರಣಕ್ಕೂ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ನಾವು ಸರ್ಕಾರ ನಡೆಸಿದ್ದೇವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ವಾಜಪೇಯಿ ಹೆಸರಿನಲ್ಲಿ ಅಟಲ್ ಸಾರಿಗೆ, ಅಟಲ್ ಜನಸ್ನೇಹಿ ಕೇಂದ್ರ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿತ್ತು. ನಾವು ಅದನ್ನು ಬದಲಾವಣೆ ಮಾಡಲು ಹೋಗಿರಲಿಲ್ಲ. ಏಕೆಂದರೆ ಅಟಲ್‍ಜೀ ಅವರ ಹೆಸರು ಈ ದೇಶಕ್ಕೆ ಬೇಕಿದೆ. ಮೊರಾರ್ಜಿ ದೇಸಾಯಿ, ಜೆ.ಪಿ.ನಾರಾಯಣ್ ಅವರ ಹೆಸರಿನಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿವೆ. ಯಾವುದನ್ನೂ ನಾವು ಬದಲಾವಣೆ ಮಾಡಲು ಹೋಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಕಂದಾಯ ಸಚಿವ ಆರ್.ಅಶೋಕ್ ಅವರು ಕನಸು ಕಾಣುತ್ತಿದ್ದಾರೆ. ನಾವಿನ್ನು ಬದುಕಿದ್ದೇವೆ, ಸತ್ತಿಲ್ಲ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಅವಕಾಶ ನೀಡುವುದಿಲ್ಲ. ಈ ಹಿಂದೆ ಸರ್ಕಾರಗಳು ಯಾವ ರೀತಿ ನಡೆದಿವೆ ಎಂಬುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಸರ್ಕಾರವಾದರೂ ಜಾತಿ ಅಥವಾ ಧರ್ಮದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಇದು ನಾಚಿಕೆಗೇಡಿನ ವಿಷಯ. ದೇಶ ಹಲವು ವೈವಿಧ್ಯತೆಗಳನ್ನು ಒಪ್ಪಿಕೊಂಡ ಜಾತ್ಯತೀತ ನಿಲುವಿನಲ್ಲಿ ನಡೆಯುತ್ತಿದೆ. ಕೇಂದ್ರ ಸರ್ಕಾರ ದೇಶದ ಸ್ವರೂಪವನ್ನೇ ಬದಲಾವಣೆ ಮಾಡುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳಿಗೆ ಅವಕಾಶಗಳಿರಬೇಕು, ಆದರೆ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನಗಳು ಖಂಡನೀಯ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ