ನವದೆಹಲಿ: 1984ರಲ್ಲಿ ಐಕೆ ಗುಜ್ರಾಲ್ ಅವರು ನೀಡಿದ್ದ ಸಲಹೆಯನ್ನು ಅಂದಿನ ಗೃಹ ಸಚಿವ ನರಸಿಂಹ ರಾವ್ ಅವರು ಪರಿಗಣಿಸಿದ್ದರೆ ಸಿಖ್ ಮಾರಣಹೋಮವನ್ನು ತಪ್ಪಿಸಬಹುದಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಹೇಳಿದ್ದಾರೆ.
ಐಕೆ ಗುಜ್ರಾಲ್ ಅವರ 100ನೇ ಜನ್ಮ ದಿನೋತ್ಸದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಮನಮೋಹನ್ ಸಿಂಗ್ ಅವರು, 1984 ರಲ್ಲಿ ನಡೆದ ಘಟನೆ ಸಂದರ್ಭದಲ್ಲಿ ಐಕೆ ಗುಜ್ರಾಲ್ ಅವರು ಸಂಜೆ ಗೃಹ ಸಚಿವ ನರಸಿಂಹ ರಾವ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇಶದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳ ಬಗ್ಗೆ ಎಚ್ಚರಿಕೆ ನೀಡಿ ಸಾಧ್ಯವಾದಷ್ಟು ಬೇಗ ಸೇನೆಯನ್ನು ನೆರವು ಪಡೆಯಲು ಸಲಹೆ ನೀಡಿದ್ದರು. ಈ ಸಲಹೆಯನ್ನು ನರಸಿಂಹ ರಾವ್ ಅವರು ಪರಿಗಣಿಸಿದ್ದರೆ ಅಂದು ನಡೆದಿದ್ದ ಸಿಖ್ ಹತ್ಯಾಕಾಂಡವನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಐಕೆ ಗುಜ್ರಾಲ್ ಅವರೊಂದಿಗಿನ ಸಂಬಂಧದ ಬಗ್ಗೆಯೂ ಮಾತನಾಡಿರುವ ಸಿಂಗ್, ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು. ಈ ವೇಳೆ ಅವರು ಹಲವು ಸಮಸ್ಯೆಗಳನ್ನು ಎದುರಿಸಿದ್ದರು. ಬಳಿಕ ಯೋಜನಾ ಆಯೋಗದ ರಾಜ್ಯ ಸಚಿವರಾಗಿದ್ದರು. ಆ ವೇಳೆ ಅವರಿಗೆ ನಾನು ಸಚಿವಾಲಯದ ಸಲಹೆಗಾರನಾಗಿದ್ದೆ, ನಂತರ ನಮ್ಮಿಬ್ಬರ ಸಂಬಂಧ ಗಟ್ಟಿಯಾಯಿತು ಎಂದು ಹೇಳಿದ್ದಾರೆ.
ಅಂದಹಾಗೇ ಐಕೆ ಗುಜ್ರಾಲ್ ಅವರು, 1997ರ ಏಪ್ರಿಲ್ ನಿಂದ 1998ರ ಮಾರ್ಚ್ ವರೆಗೂ ದೇಶದ 12ನೇ ಪ್ರಧಾನಿಯಾಗಿದ್ದರು. 1984ರಲ್ಲಿ ಪ್ರಧಾನಿ ಇಂಧಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರೇ ಹತ್ಯೆ ಮಾಡಿದ್ದರು. ಈ ಹತ್ಯೆಯ ಪ್ರತೀಕಾರವಾಗಿ ನಡೆದ ಘರ್ಷಣೆಯಲ್ಲಿ ನವದೆಹಲಿಯೊಂದರಲ್ಲೇ 2,800 ಜನರನ್ನು ಹತ್ಯೆ ಮಾಡಲಾಗಿತ್ತು. ದೇಶಾದ್ಯಂತ ಈ ಸಾವಿನ ಸಂಖ್ಯೆ 3 ಸಾವಿರ ಜನರನ್ನು ದಾಟಿತ್ತು. ಸರ್ಕಾರಿ ಅಂಕಿ ಅಂಶಗಳು 3,350 ಮಂದಿ ಸಿಖ್ ಹತ್ಯಾಕಾಂಡದಲ್ಲಿ ಬಲಿಯಾಗಿದ್ದಾರೆ ಎಂದು ತಿಳಿಸಿದರೆ, ಸ್ವತಂತ್ರ ಸಂಸ್ಥೆಗಳು ನೀಡಿರುವ ಮಾಹಿತಿ ಅನ್ವಯ ಈ ಸಂಖ್ಯೆ 8 ಸಾವಿರದಿಂದ 17 ಸಾವಿರ ಮಂದಿಯ ಹತ್ಯೆ ಮಾಡಲಾಗಿತ್ತು ಎಂದಿದೆ. ಈ ಹತ್ಯಾಕಾಂಡ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿತ್ತು.