ಟಿವಿಗಳಲ್ಲಿ ಬರುವ ಭವಿಷ್ಯವನ್ನು ನಂಬಬೇಡಿ-ಪವಾಡ ಭಂಜಕ ಹುಲಿಕಾಲ್ ನಟರಾಜ್

ಬೆಂಗಳೂರು, ಡಿ.4- ಮನುಷ್ಯನ ಬದುಕು ಸಂಖ್ಯಾಶಾಸ್ತ್ರ, ಗಿಳಿಶಾಸ್ತ್ರ ಅಥವಾ ಕವಡೆ ಶಾಸ್ತ್ರಗಳನ್ನು ಅವಲಂಬಿಸಿರುವುದಿಲ್ಲ. ಟಿವಿಗಳಲ್ಲಿ ಬರುವ ಭವಿಷ್ಯವನ್ನು ನಂಬಬೇಡಿ. ಯಶಸ್ಸಿಗೆ ಅಡ್ಡದಾರಿಗಳಿಲ್ಲ. ಕಠಿಣ ಪರಿಶ್ರಮ ಅತ್ಯಗತ್ಯ ಎಂದು ಪವಾಡ ಭಂಜಕ ಹುಲಿಕಾಲ್ ನಟರಾಜ್ ತಿಳಿಸಿದರು.

ಪೀಣ್ಯ ದಾಸರಹಳ್ಳಿ ಸಮೀಪದ ಕಾಕೋಳು ಗ್ರಾಮದಲ್ಲಿ ಡಾ.ಎನ್‍ಎಸ್‍ಎಎಂ ಪದವಿ ಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಶಿಬಿರದಲ್ಲಿ ಪವಾಡಗಳು ಹಾಗೂ ಅವುಗಳ ಹಿಂದಿನ ತಂತ್ರ ಬಯಲು ಮಾಡಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಿ ಮಾತನಾಡಿದರು.

ಮೊಬೈಲ್ ಗೀಳಿನಿಂದ ಹೊರ ಬಂದು ವೈಜ್ಞಾನಿಕ ಕಲಿಕಾ ಹವ್ಯಾಸವನ್ನು ಬೆಳೆಸಿಕೊಳ್ಳಿ. ಕನ್ನಡ ಸಾಹಿತ್ಯದಲ್ಲಿ ಅಗಾಧ ವಿಜ್ಞಾನ ಅಡಕವಾಗಿದ್ದು, ಕುವೆಂಪು, ಬೇಂದ್ರೆ, ಶಿವರಾಮಕಾರಂತ, ಅನಂತಮೂರ್ತಿ ಅವರ ಸಾಹಿತ್ಯ ಓದಿ. ಉತ್ತಮ ಬದುಕು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಮುಳ್ಳಿನ ಮೇಲೆ ಕುಳಿತು ಚಕಿತಗೊಂಡ ವಿದ್ಯಾರ್ಥಿ, ಮೊಳೆಗಳ ಮೇಲೆ ಸಲೀಸಾಗಿ ಮಲಗಿದ ವಿದ್ಯಾರ್ಥಿನಿಯರು, ಚಿನ್ನದ ಬಳೆಗಳು ಮಾಯವಾಗಿ ಕ್ಷಣಾರ್ಧದಲ್ಲಿ ಪ್ರತ್ಯಕ್ಷವಾದಾಗ ಬೆರಗುಗೊಂಡ ಶಿಕ್ಷಕಿ, ನೀರಿನ ಕೊಡದಲ್ಲಿ ಮೂಡಿದ ಹೂವು, ತೆಂಗಿನ ಕಾಯಿಯ ಜುಟ್ಟಿನಲ್ಲಿ ಹೊತ್ತಿಕೊಂಡ ಬೆಂಕಿ, ಇಂಥ ಪವಾಡಗಳು ಹಾಗೂ ಅವುಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ನಟರಾಜ್ ಅರಿವು ಮೂಡಿಸಿದರು.

ಪ್ರಾಂಶುಪಾಲೆ ಚಿತ್ರ ಎಸ್.ಪಿ. ಮತ್ತು ಕಾರ್ಯಕ್ರಮಾಧಿಕಾರಿ ರವಿಕುಮಾರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ