ಕೋಲ್ಕೊತಾ: ದೀರ್ಘ ಅವಧಿಯ ಕ್ರಿಕೆಟ್ನಲ್ಲಿಅಗ್ರ ಸ್ಥಾನದಲ್ಲೇ ಮುಂದುವರಿದಿರುವ ಭಾರತ ತಂಡ, ತನ್ನ ಪಾಲಿನ ಚೊಚ್ಚಲ ಹಗಲು ರಾತ್ರಿ- ಟೆಸ್ಟ್ ಪಂದ್ಯದಲ್ಲೂಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯವೂ ಇದಾಗಿದ್ದು, ಈಗಾಗಲೇ 1-0 ಮುನ್ನಡೆ ಕಾಪಾಡಿಕೊಂಡಿರುವ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸರಣಿ ಕ್ಲೀನ್ಸ್ವೀಪ್ ಮಾಡುವ ಗುರಿ ಹೊಂದಿದೆ.
ಇತಿಹಾಸ ಪ್ರಸಿದ್ಧ ಕೋಲ್ಕೊತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಐತಿಹಾಸಿಕ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ ನಾಯಕ ಮೊಮಿನುಲ್ ಹಕ್ ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದ್ದಾರೆ.
ಸರಣಿ ಗೆಲುವಿನ ಗುರಿ…
ಮೊದಲ ಪಂದ್ಯದಲ್ಲಿಇನಿಂಗ್ಸ್ ಹಾಗೂ 130 ರನ್ಗಳ ಅಂತರದ ಜಯ ಕಂಡಿರುವ ಭಾರತ, ಎರಡನೇ ಪಂದ್ಯಕ್ಕೆ ಮೊದಲು ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಹಿಂದಿನ ಪಂದ್ಯದ ಆಲ್ರೌಂಡ್ ಪ್ರದರ್ಶನ ತಂಡದ ಸ್ಥೈರ್ಯವನ್ನೂ ಹೆಚ್ಚಿಸಿದೆ. ಗುಲಾಬಿ ಬಣ್ಣದ ಚೆಂಡು ವೇಗಕ್ಕೆ ಸೂಕ್ತವಾಗಿದೆ ಎನ್ನುವ ಕ್ರಿಕೆಟ್ ಪಂಡಿತರ ಅಭಿಪ್ರಾಯ ಭಾರತದ ವೇಗದ ವಿಭಾಗಕ್ಕೆ ಸಂತಸದ ವಿಷಯ.
ಗೆಲುವಿನ ಓಟ ಟೆಸ್ಟ್ ಚಾಂಪಿಯನ್ಷಿಪ್ ಆರಂಭದ ಬಳಿಕದ ಭಾರತ ತಂಡದ ಪ್ರದರ್ಶನ ಅಮೋಘವಾಗಿದೆ. ಟೀಮ್ ಇಂಡಿಯಾ ಬ್ಯಾಟಿಂಗ್ನಲ್ಲಿಈ ಹಿಂದಿಗಿಂತ ಹೆಚ್ಚು ಶಕ್ತಿಯುತವಾಗಿ ಕಾಣಿಸುತ್ತಿದೆ. ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಭದ್ರ ಅಡಿಪಾಯ ಹಾಕಿದರೆ, ರೋಹಿತ್ ಶರ್ಮ ರನ್ ಬೆಟ್ಟ ನಿರ್ಮಿಸುವ ಉಮೇದಿನಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ರನ್ ಗಳಿಕೆಯ ಹಳಿಯಲ್ಲೇ ಸಾಗುತ್ತಿದ್ದಾರೆ. ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿಯೂ ಉತ್ತುಂಗದಲ್ಲಿದೆ. ಬೌಲರ್ ಉಮೇಶ್ ಯಾದವ್ ಕೂಡ ಸಿಕ್ಸರ್ಗಳ ಮೂಲಕ ಟೆಸ್ಟ್ನಲ್ಲೂ ಮನರಂಜಿಸುವುದು ಖಾತರಿಯಾಗಿದೆ.
ವಿರಾಮ ಎಷ್ಟು ಹೊತ್ತಿಗೆ?
ಸಾಂಪ್ರಾದಾಯಿಕ ಟೆಸ್ಟ್ ಕ್ರಿಕೆಟ್ಗಳಿಗೆ ವಿಭಿನ್ನವಾಗಿ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಎರಡು ವಿರಾಮಗಳ ಅವಧಿಗಳು ಮಾತ್ರ ನಿಗದಿಯಾಗಿದೆ. ಮಧ್ಯಾಹ್ನ 1 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಮೂರು ಗಂಟೆಗೆ 40 ನಿಮಿಷಗಳ ಲಂಚ್ ಬ್ರೇಕ್ ತೆಗೆದುಕೊಳ್ಳಲಾಗುವುದು. ಬಳಿಕ 5.40ಕ್ಕೆ ಸರಿಯಾಗಿ 20 ನಿಮಿಷಗಳ ಟೀ ವಿರಾಮ ನಿಗದಿಯಾಗಿದೆ.