ತನ್ವೀರ್ ಸೇಠ್ ಹಲ್ಲೆ ಪ್ರಕರಣ: ತರಬೇತಿ ಪಡೆದಿದ್ದ ದಾಳಿಕೋರ!

ಬೆಂಗಳೂರು: ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ದಾಳಿಕೋರ ತರಬೇತಿ ಪಡೆದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದಾಳಿ ನಡೆದ ಘಟನೆಯ ವಿಡಿಯೋವನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ದಾಳಿ ನಡೆಸಿರುವ ವಿಧಾನವನ್ನು ಪೊಲೀಸರು ಸೂಕ್ಷ್ಮವಾಗಿ ಗಮನಿಸಿದ್ದು, ಈ ವೇಳೆ ದಾಳಿಕೋರ ತರಬೇತಿಕೊಂಡಿದ್ದಾನೆಂದು ತಿಳಿಸಿದ್ದಾರೆ.

ಬನ್ನಿಮಂಟಪ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಆರತಕ್ಷತೆ ವೇಳೆ ತನ್ವೀರ್ ಸೇಠ್ ಅವರು ಆಸೀನರಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆರೋಪಿ ಫರ್ಹಾನ್ ಪಾಷಾ, ದಾಳಿಗೂ ಮುನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ. ಈ ಹಿಂದೆ ಕೂಡ ನಾಲ್ಕು ಬಾರಿ ತನ್ವೀರ್ ಸೇಠ್ ಅವರನ್ನು ಹತ್ಯೆ ಮಾಡಲು ಯತ್ನ ನಡೆಸಿದ್ದ ಎಂದು ಹೇಳಲಾಗುತ್ತಿದೆ.

ತನಿಖೆ ವೇಳೆ ದಾಳಿಗೆ ನಾನೇ ಜವಾಬ್ದಾರಿ ಎಂದು ಫರ್ಹಾನ್ ಹೇಳಿಕೊಂಡಿದ್ದು, ಇತರರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾನೆ. ಇದೀಗ ಪೊಲೀಸರು ಫರ್ಹಾನ್ ಜೊತೆಗಿದ್ದ ಸ್ನೇಹಿತರು, ಇತರರನ್ನು ತನಿಖೆಗೊಳಪಡಿಸಿದ್ದಾರೆ. ಇನ್ನೂ ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ನಡುವೆ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ತನ್ವೀರ್ ಸೇಠ್ ಅವರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪ್ರತೀ ಪಾಳಿಯಲ್ಲೂ ಮೂವರು ಗನ್ ಮ್ಯಾನ್ ಗಳನ್ನು ನಿಯೋಜಿಸಿದ್ದಾರೆ. ಈ ಹಿಂದೆ ತನ್ವೀರ್ ಸೇಠ್ ಅವರಿಗೆ ಭದ್ರತೆ ನೀಡುತ್ತಿದ್ದ ಗನ್ ಮ್ಯಾನ್ ಫಿರೋಜ್ ಖಾನ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಘಟನೆ ಕುರಿತಂತೆ ಮಾತನಾಡಿರುವ ಮಾಜಿ ಸಚಿವ ಯು.ಟಿ.ಖಾದರ್ ಅವರು, ದಾಳಿಯಲ್ಲಿ ಎಸ್’ಡಿಪಿಐ ಕೈವಾಡವಿರುವುದು ಸಾಬೀತಾಗಿದ್ದೇ ಆದರೆ, ಸರ್ಕಾರ ಆ ಸಂಘಟನೆಯನ್ನು ನಿಷೇಧಿಸಬೇಕು ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ