ಕೆನಡಾ ಪ್ರಧಾನಿ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಹಿಂದೂ ಮಹಿಳೆ ಅನಿತಾ

ಒಟ್ಟಾವ: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಬುಧವಾರ ತನ್ನ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಂಪುಟದಲ್ಲಿ ಒಟ್ಟು 7 ಮಂದಿಗೆ ಸಚಿವ ಸ್ಥಾನ ನೀಡಲಾಗಿದ್ದು, ಈ ಪೈಕಿ ನಾಲ್ವರು ಭಾರತೀಯರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರಿಗೆ ಸಂಪುಟದಲ್ಲಿ ಸಚಿವ ಸ್ಥಾನ ದೊರೆತಿದೆ. ಭಾರತೀಯ ಮೂಲದ ಅನಿತಾ ಇಂದಿರಾ ಆನಂದ್ ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿರುವ ಏಕೈಕ ಹಿಂದೂ ಮಹಿಳೆಯಾಗಿದ್ದಾರೆ.

ಟೊರೊಂಟೊ ವಿಶ್ವವಿದ್ಯಾಲಯದ ಮಾಜಿ ಕಾನೂನು ಪ್ರಾಧ್ಯಾಪಕಿ ಅನಿತಾ ಆನಂದ್ ಅವರಿಗೆ ಟ್ರುಡೊ ಸಂಪುಟಕ್ಕೆ ಸೇರುವ ಅವಕಾಶ ದೊರೆತಿದ್ದು, ಮಿಕ್ಕಂತೆ ಸಿಖ್‌ ಸಮುದಾಯದ ನವದೀಪ್‌ ಬೈನ್ಸ್‌, ಬರ್ದಿಶ್‌ ಛಾಗ್ಗೆರ್‌ ಮತ್ತು ಹರ್‌ಜೀತ್‌ ಸಜ್ಜನ್‌ ಸಂಪುಟ ಸೇರಿದ ಇತರ ಮೂವರು ಭಾರತೀಯ ಮೂಲದ ಸಂಸದರಾಗಿದ್ದಾರೆ.

ಒಟ್ಟಾರೆ 37 ಸಚಿವರು ಟ್ರುಡೊ ಸಂಪುಟದಲ್ಲಿದ್ದಾರೆ. 338 ಸೀಟುಗಳ ಕೆನಡಾ ಸಂಸತ್ತಿಗೆ ಅಕ್ಟೋಬರ್‌ನಲ್ಲಿಸಾರ್ವತ್ರಿಕ ಚುನಾವಣೆ ನಡೆಯಿತು. ಇದರಲ್ಲಿಟ್ರುಡೊ ನೇತೃತ್ವದ ಲಿಬರಲ್‌ ಪಕ್ಷಕ್ಕೆ 157 ಸೀಟುಗಳು ಲಭಿಸಿವೆ. ಬಹುಮತ (170)ಕ್ಕೆ 13 ಸ್ಥಾನಗಳ ಕೊರತೆ ಇದೆ.’

ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಒಂಟಾರಿಯೊದ ಓಕ್ವಿಲ್ಲೆ ಕ್ಷೇತ್ರದಿಂದ ಮೊದಲ ಬಾರಿಗೆ ಹೌಸ್ ಆಫ್ ಕಾಮನ್ ಗೆ ಆಯ್ಕೆಯಾದ ಅನಿತಾ ಅವರಿಗೆ ಸಾರ್ವಜನಿಕ ಸೇವೆ ಮತ್ತು ಖರೀದಿ ಸಚಿವ ಸ್ಥಾನ ಕೊಡಲಾಗಿದೆ.

ಅನಿತಾ ಇಂದಿರಾ ಆನಂದ್ ಅವರ ಹೆತ್ತವರು ಭಾರತೀಯ ಮೂಲದವರಾಗಿದ್ದು ಇಬ್ಬರೂ ವೈದ್ಯಕೀಯ ವೃತ್ತಿಯಲ್ಲಿದ್ದರು. ತಾಯಿ ದಿ.ಸರೋಜ್ ರಾಮ್ ಪಂಜಾಬ್ ನ ಅಮೃತಸರದವರು ತಂದೆ ತಮಿಳುನಾಡು ಮೂಲದವರು. ನಾಲ್ಕು ಮಕ್ಕಳ ತಾಯಿಯಾಗಿರುವ ಅನಿತಾ ಇಂದಿರಾ ಆನಂದ್ ಓಕ್ವಿಲ್ಲೆ ಕೆನಡಿಯನ್ ಮ್ಯೂಸಿಯಂ ಆಫ್ ಹಿಂದೂ ಸಿವಿಲಿಜೇಷನ್ಸ್ ನ ಮಾಜಿ ಅಧ್ಯಕ್ಷೆ ಕೂಡ ಹೌದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ